ಕಡಬ, ನ 21 (DaijiworldNews/SM): ಬ್ಯಾಂಕಿಗೆ ಬಂದಿದ್ದ ಯುವಕನೋರ್ವ ಬ್ಯಾಂಕ್ ಬಳಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಆಲಂಕಾರಿನಲ್ಲಿ ನಡೆದಿದೆ.
ಆಲಂಕಾರು ಗ್ರಾಮದ ಕರಂದ್ಲಾಜೆ ನಿವಾಸಿ ನಾರಾಯಣ ಗೌಡರ ಪುತ್ರ ರೋಹಿತಾಕ್ಷ(27)ಮೃತಪಟ್ಟವರು. ರೋಹಿತಾಕ್ಷರವರು ತನ್ನ ಕಾರಿನಲ್ಲಿ ಪುತ್ತೂರಿಗೆ ಹೋದವರು ಸಂಜೆ ವೇಳೆಗೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಂದಿದ್ದರು. ಬ್ಯಾಂಕಿನ ವ್ಯವಹಾರಗಳನ್ನು ಮುಗಿಸಿಕೊಂಡು ಹೊರಗೆ ಬಂದು ಮನೆಗೆ ತೆರಳಲು ಕಾರಿನಲ್ಲಿ ಕುಳಿತಿರುವಾಗ ಕಾರಿನೊಳಗೆ ಕುಸಿದು ಬಿದ್ದಿದ್ದರು.
ತಕ್ಷಣ ಅವರನ್ನು ಬ್ಯಾಂಕಿನ ಸಿಬ್ಬಂದಿಗಳು ಆಂಬ್ಯುಲೆನ್ಸ್(108) ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ರೋಹಿತಾಕ್ಷರವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರಬಹುದೆಂದು ಹೇಳಲಾಗಿದೆ. ಮೃತರು ಅವಿವಾಹಿತರಾಗಿದ್ದು ತಂದೆ, ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.