ಬೆಂಗಳೂರು, ನ 22 (Daijiworld News/MSP): ಪಾರಂಪರಿಕ ಕಟೀಲು ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರನ್ನು ಮೇಲ್ವಿಚಾರಣೆಗೆ ನೇಮಿಸಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಮಾತ್ರವಲ್ಲದೇ ಯಕ್ಷಗಾನ ಮೇಳವನ್ನು ಈ ಹಿಂದೆ ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಮತ್ತು ಸೇವಾಕರ್ತರು ನಡೆಸಿಕೊಂಡು ಹೋಗುತ್ತಿದ್ದ ರೀತಿಯಲ್ಲೇ ಈ ವರ್ಷವೂ ನಡೆಸಿಕೊಂಡು ಹೋಗಲು ಹೈಕೋರ್ಟ್ ಅಸ್ತು ಎಂದಿದೆ.
ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಸಲ್ಲಿಸಿದ್ದ ಅರ್ಜಿಯು ನ್ಯಾ| ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದು ವಾದ-ಪ್ರತಿವಾದ ಆಲಿಸಿದ ಬಳಿಕ ಯಕ್ಷಗಾನ ಮೇಳವನ್ನು ಈ ಹಿಂದೆ ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಮತ್ತು ಸೇವಾಕರ್ತರು ನಡೆಸಿಕೊಂಡು ಬಂದ ರೀತಿಯಲ್ಲೇ ಈ ವರ್ಷವೂ ಮುಂದುವರಿಸಲಿ. ಆದರೆ ಎಲ್ಲಾ ಲೆಕ್ಕಪತ್ರಗಳನ್ನು ಜಿಲ್ಲಾಧಿಕಾರಿಯೇ ನೋಡಬೇಕು. 15 ದಿನಗಳಿಗೊಮ್ಮೆ ಲೆಕ್ಕಪತ್ರ ಒಪ್ಪಿಸಬೇಕು ಎಂದು ಸೂಚಿಸಿತು.
ಕಲಾವಿದ ಸಂಬಳದ ವಿಚಾರದಲ್ಲೂ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿತು. ಕಾರ್ಮಿಕರಿಗೆ ಎಲ್ಲಾ ವ್ಯವಸ್ಥೆ ಮಾಡಿ, ಕಲಾವಿದರನ್ನು ಕಾರ್ಮಿಕ ಕಾಯ್ದೆ ಅಡಿಯಲ್ಲಿ ತರಬೇಕು. ಕ್ಷೇಮ ನಿಧಿ ಅಡಿಯಲ್ಲಿ ತರಬೇಕು ಎಂದು ನಿರ್ದೇಶಿಸಿತು.
ಇನ್ನು ಕೋರ್ಟ್ ಗೆ ಹಾಜರಾದ ಮುಜರಾಯಿ ಆಯಕ್ತರು, ತಾವು ಹೊರಡಿಸಿದ ಅಧಿಸೂಚನೆ ವಾಪಸ್ ಪಡೆಯುವುದಾಗಿ ಮುಚ್ಚಳಿಕೆ ಬರೆದುಕೊಟ್ಟರು. ನ್ಯಾಯಾಲಯದ ತಡೆಯಾಜ್ಞೆ ಇದ್ದಾಗಲೂ ಆದೇಶ ಹೊರಡಿಸಿರುವುದಕ್ಕೆ ಕೋರ್ಟ್ ಕ್ಷಮೆಯಾಚಿಸಿದ ಮುಜರಾಯಿ ಆಯುಕ್ತರು ಈ ಕುರಿತು ಶುಕ್ರವಾರ (ನ.22) ಅನುಪಾಲನ ವರದಿ ಸಲ್ಲಿಸುವುದಾಗಿ ಹೇಳಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಈ ಮೇಲಿನಂತೆ ನಿರ್ದೇಶನ ನೀಡಿ ವಿಚಾರಣೆ ಡಿ. 9 ರ ತನಕ ಮುಂದೂಡಿತು.
ಈ ಅದೇಶ ಡಿಸೆಂಬರ್ 9 ರ ತನಕ ಮಾತ್ರ ಜಾರಿಯಲ್ಲಿರುತ್ತದೆ. ಈ ದಿನ ಅಂತಿಮ ಆದೇಶ ಹೊರಬೀಳಲಿದೆ.