ನವದೆಹಲಿ, ಜ 12: ಭಾರತದ ಪ್ರಧಾನಿ ನರೇಂದ್ರ ಮೋದಿ ಗ್ಯಾಲಪ್ ಇಂಟರ್ನ್ಯಾಶನಲ್ ನಡೆಸಿರುವ ಒಪೀನಿಯನ್ ಆಫ್ ವರ್ಲ್ಡ್ ಲೀಡರ್ ಎಂಬ ವಾರ್ಷಿಕ ಸಮೀಕ್ಷೆಯಲ್ಲಿ ಜಗತ್ತಿನ ಮೂರನೇ ಅತ್ಯಂತ ಜನಪ್ರಿಯ ನಾಯಕನೆನಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಜಿನ್ ಪಿಂಗ್ ರನ್ನು ಹಿಂದಿಕ್ಕಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಗ್ಯಾಲಪ್ ಇಂಟರ್ ನ್ಯಾಷನಲ್ ಸಂಸ್ಥೆ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯನ್ನು ನಡೆಸಿದ್ದು ಇದರಲ್ಲಿ ಪ್ರಧಾನಿ ಮೋದಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೋದಿ ಜಗತ್ತಿನ ಪ್ರಬಲ ನಾಯಕರನ್ನು ಹಿಂದಿಕ್ಕಿದ್ದಾರೆ.
ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಜಗತ್ತಿನ ಜನಪ್ರಿಯ ನಾಯಕರಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್ ನ ನೂತನ ಪ್ರಧಾನಿ ಎಮ್ಯಾನುವೆಲ್ ಮ್ಯಾಕ್ರನ್ ಎರಡನೇ ಸ್ಥಾನದಲ್ಲಿದ್ದಾರೆ. ಬ್ರಿಟನ್ ಪ್ರಧಾನಿ ಥೆರೆಸಾ ಮೇ ನಾಲ್ಕನೇ ಸ್ಥಾನ, ಜಿನ್ ಪಿಂಗ್ ಐದನೇ ಸ್ಥಾನದಲ್ಲಿದ್ದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 11ನೇ ಸ್ಥಾನ ಪಡೆದಿದ್ದಾರೆ.
ಭಾರತದ ಚುನಾವಣಾ ಇತಿಹಾಸದಲ್ಲಿ ಪ್ರಧಾನಿ ಮೋದಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದು,ಈ ಬಾರಿ ಚುನಾವಣಾ ಪ್ರಚಾರದ ಸಾಲಿಗೆ ಗ್ಯಾಲ್ಲಪ್ ಸಮೀಕ್ಷೆಯು ಮತ್ತಷ್ಟು ಉತ್ತೇಜನ ನೀಡಲಿದೆ. ಮಾತ್ರವಲ್ಲದೆ, ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಡುವ ಸಾಧ್ಯತೆ ಇದೆ.