ಉಳ್ಳಾಲ, ನ 22 (Daijiworld News/MSP): ಅಯ್ಯಪ್ಪ ಮಾಲಾಧಾರಿ ಗುರುಸ್ವಾಮಿಯೊಬ್ಬರು ಅಯ್ಯಪ್ಪನನ್ನು ಪೂಜಿಸುತ್ತಿದ್ದ ಗುಡಿಯಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಮಾಡೂರು ಎಂಬಲ್ಲಿ ನಡೆದಿದೆ. ಆನಂದ ಎಂ.ಕೆ(62) ಮೃತಪಟ್ಟ ಗುರುಸ್ವಾಮಿ. ಕೆಲ ದಿನಗಳ ಹಿಂದಷ್ಟೇ ಅಯ್ಯಪ್ಪ ಮಾಲೆ ಧರಿಸಿದ್ದ ಇವರು ಮಾಡೂರು ಕೊರಗಜ್ಜ ಸೇವಾ ಸಮಿತಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಅಯ್ಯಪ್ಪ ಗುಡಿಯಲ್ಲಿ ವೃತಾಚರಣೆ ಮಾಡುತ್ತಿದ್ದರು.
ಗುರುಸ್ವಾಮಿಯಾಗಿದ್ದ ಇವರು ಗುರುವಾರ ರಾತ್ರಿ ಎಂದಿನಂತೆ ಕಿರಿಯ ಸ್ವಾಮಿಗಳ ಜೊತೆ ಅಯ್ಯಪ್ಪ ಸ್ವಾಮಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದರು. ಆದರೆ ನಿದ್ದೆಗೆ ಜಾರಿದ ಬಳಿಕ ಮಲಗಿದಲ್ಲೇ ಹೃದಯಾಘಾತವಾಗಿದೆ ಎನ್ನಲಾಗಿದೆ. ಬೆಳಿಗ್ಗೆ ಇತರೆ ಸ್ವಾಮಿಗಳು ಎಬ್ಬಿಸಲು ಮುಂದಾಗಿದ್ದು, ಈ ವೇಳೆ ಏಳದೇ ಇದ್ದಾಗ ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಮೃತ ಆನಂದ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗೃಹವಾದ ಮಾಡೂರಿನಲ್ಲಿ ನೆರವೇರಿಸಿದ್ದು, ಕುಟುಂಬಿಕರು, ಮಾಲಾಧಾರಿಗಳು ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಆನಂದ ಗುರುಸ್ವಾಮಿಗಳು ಮಾಡೂರು ಕೊರಗಜ್ಜ ಸೇವಾ ಸಮಿತಿಯ ಉಪಾಧ್ಯಕ್ಷರೂ ಆಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಮೊಮ್ಮಗಳನ್ನು ಅಗಲಿದ್ದಾರೆ.