ಮಂಗಳೂರು, ನ 23 (Daijiworld News/MSP): ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ಗೆಜ್ಜೆ ಮುಹೂರ್ತ ಶ್ರೀಕ್ಷೇತ್ರದಲ್ಲಿ ಶುಕ್ರವಾರ ಸಂಜೆ ವೈಭವದಿಂದ ನಡೆದಿದ್ದು, 2019-20ನೇ ಸಾಲಿನ ತಿರುಗಾಟಕ್ಕೆ ಚಾಲನೆ ನೀಡಲಾಯಿತು. ಕಟೀಲು ಶ್ರೀ ದೇವಿಯ ಗರ್ಭಗುಡಿಯ ಮುಂದೆ ಕಲಾವಿದರಿಗೆ ದೇವಳದ ಆರ್ಚಕ ಅನಂತಪದ್ಮನಾಭ ಅಸ್ರಣ್ಣ ಗೆಜ್ಜೆಗಳನ್ನು ನೀಡುವ ಈ ವರ್ಷದ ತಿರುಗಾಟಕ್ಕೆ ಚಾಲನೆ ನೀಡಲಾಯಿತು.
ರಾತ್ರಿ 8.30ಕ್ಕೆ ದೇವಳಯದ ರಥಬೀದಿಯಲ್ಲಿ ಹಾಕಿದ ಚೌಕಿಗೆ ಪೂಜೆಯೊಂದಿಗೆ ಸೇವೆಯಾಟ ಆರಂಭವಾಯಿತು. ಆ ಬಳಿಕ ’ಪಾಂಡವಾಶ್ವಮೇಧ’ ಯಕ್ಷಗಾನ ಸೇವೆಯಾಟ ನಡೆಯಿತು. ಈ ಸಂದರ್ಭ ಭಾಗವತಿಕೆ ನಡೆಸಲು ರಂಗಸ್ಥಳಕ್ಕೆ ಬಂದ ಪಟ್ಲ ಸತೀಶ್ ಶೆಟ್ಟಿಯನ್ನು ಭಾಗವತಿಕೆ ನಡೆಸಲು ಬಿಡದೆ ವಾಪಸ್ ಕಳುಹಿಸಲಾಯಿತು. ಇದು ಯಕ್ಷಗಾನ ಪ್ರೇಮಿಗಳಿಗೆ ಬೇಸರ ಉಂಟುಮಾಡಿದ್ರೆ, ಪಟ್ಲ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳ ಹಿಂದೆ ಪಟ್ಲ ಅವರು ಸಮಯ ಪರಿಪಾಲನೆ ಮಾಡಿಲ್ಲ ಎಂದು ಒಂದಷ್ಟು ಜನ ಆಡಿಕೊಳ್ಳುತ್ತಿದ್ರೆ , ಇನ್ನೊಂದಿಷ್ಟು ಮಂದಿ, "ಕಟೀಲು ಮೇಳ ಏಲಂ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ ಹಿನ್ನಲೆಯಲ್ಲಿ ಆಡಳಿತ ಮಂಡಳಿಯು ಸತೀಸ್ ಪಟ್ಲ ಅವರ ಮೇಲೆ ಅಸಮಾಧಾನಗೊಂಡಿದ್ದು ಈ ರೀತಿ ನಡೆದುಕೊಂಡಿದ್ದಾರೆ’ ಎನ್ನುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸತೀಶ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ.
ಭಾಗವತಿಕೆ ನಡೆಸಲು ಬಿಡದೆ ಹೊರಕ್ಕೆ ಕಳುಹಿಸಿದ ಬಳಿಕ ಸತೀಶ್ ಪಟ್ಲ ಅವರು ಮೌನವಾಗಿ ಕಟೀಲು ಕ್ಷೇತ್ರದಲ್ಲಿ ದೇವರಿಗೆ ನಮಸ್ಕರಿಸಿ ಅಲ್ಲಿಂದ ಹೊರಟುಹೋಗಿದ್ದಾರೆ ಎನ್ನಲಾಗಿದೆ.
ಕಟೀಲು ಮೇಳದಲ್ಲಿ ಕಲಾವಿದರ ಶೋಷಣೆಯಾಗುತ್ತಿದೆ, ಸಂಬಳ ನೀಡದೆ ಸತಾಯಿಸುತ್ತಿದ್ದಾರೆಂದು ಮೇಳದಿಂದ ಹೊರಹಾಕಲ್ಪಟ್ಟ ಕಲಾವಿದರು ಸೇರಿ ಎರಡು ವರ್ಷಗಳ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಬಳಿಕ, ಯಕ್ಷಗಾನ ಮೇಳವನ್ನು ಸಾರ್ವಜನಿಕ ಹರಾಜು ನಡೆಸುವಂತೆ ಆರು ತಿಂಗಳ ಹಿಂದೆ ಕೋರ್ಟ್ ಆದೇಶ ನೀಡಿತ್ತು. ಆದರೆ ಯಕ್ಷಗಾನ ಮೇಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರನ್ನು ಮೇಲ್ವಿಚಾರಣೆಗೆ ನೇಮಿಸಿ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ನೀಡಿತ್ತು. ಮಾತ್ರವಲ್ಲದೇ ಯಕ್ಷಗಾನ ಮೇಳವನ್ನು ಈ ಹಿಂದೆ ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಮತ್ತು ಸೇವಾಕರ್ತರು ನಡೆಸಿಕೊಂಡು ಹೋಗುತ್ತಿದ್ದ ರೀತಿಯಲ್ಲೇ ಈ ವರ್ಷವೂ ನಡೆಸಿಕೊಂಡು ಹೋಗಲು ಹೈಕೋರ್ಟ್ ಅಸ್ತು ಎಂದಿತ್ತು.
ಶನಿವಾರ ಸಂಜೆ ಮಂಗಳೂರಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ತುರ್ತು ಸಭೆ ಕರೆಯಲಾಗಿದ್ದು, ಇದರ ನಂತರ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಕಟೀಲು ಮೇಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ ಎಂದರೂ ತಪ್ಪಗಲಾರದು.