ಮೂಡುಬಿದಿರೆ ಜ 14 : ಮೂಡುಕೊಣಾಜೆ ಗ್ರಾಮದ ಕೈಕಂಜಿಕಡಪು ಸೇತುವೆ ಅಡಿಯಲ್ಲಿ ಜ 13 ರ ಶನಿವಾರ ಸಂಜೆ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರ ಶವ ಗೋಣಿಚೀಲದಲ್ಲಿ ಪತ್ತೆಯಾಗಿದೆ.
ಮೇಯಲು ಬಿಟ್ಟ ದನಗಳನ್ನು ಕರೆತರಲು ಶನಿವಾರ ಸಂಜೆ ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಪಿ. ಹೆಗ್ಡೆ ಕೈಕಂಜಿಕಡಪು ಪ್ರದೇಶಕ್ಕೆ ಹೋದಾಗ ಸೇತುವೆ ಕೆಳಗಡೆ ಬಾಯಿ ಕಟ್ಟಿದ್ದ ಬಿಳಿಗೋಣಿಚೀಲ ಪತ್ತೆಯಾಗಿದ್ದು ಅದರ ಸುತ್ತ ನೊಣಗಳು ಹಾರಾಡುತ್ತಿತ್ತೆನ್ನಲಾಗಿದೆ. ಅನುಮಾನಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಗೋಣಿಚೀಲವನ್ನು ಬಿಡಿಸಿ ನೋಡಿದಾಗ ಅದರೊಳಗೆ ಮಧ್ಯವಯಸ್ಸಿನ ಪುರುಷರೊಬ್ಬರ ಶವ ಪತ್ತೆಯಾಗಿದೆ.
ವ್ಯಕ್ತಿಯನ್ನು ಉಸಿರುಗಟ್ಟಿಸಿ ಸಾಯಿಸಿ ಬಳಿಕ ಗೋಣಿಯಲ್ಲಿ ತುಂಬಿಸಿ ಸೇತುವೆಯಿಂದ ಕೆಳಗೆ ಎಸೆದಿರಬೇಕೆಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಶವದ ಮುಖ ಮತ್ತು ತಲೆ ನಜ್ಜುಗುಜ್ಜಾದ ರೀತಿಯಲ್ಲಿ ಕಂಡುಬಂದಿದ್ದರು ಸುಮಾರು 20 ಅಡಿ ಎತ್ತರದ ಸೇತುವೆಯಿಂದ ಶವವನ್ನು ಕೆಳಗೆ ಎಸೆಯುವಾಗ ಈ ರೀತಿಯಾಗಿರಬಹುದೆಂದು ಕೂಡ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ವ್ಯಕ್ತಿಗೆ ಸುಮಾರು 45 ರಿಂದ 50 ವರ್ಷ ಪ್ರಾಯವಾಗಿರಬಹುದು. ಕೇಸರಿ ಬಣ್ಣದ ಲುಂಗಿ ಧರಿಸಿದ್ದು ನೀಲಿಬಣ್ಣದ ಗೆರೆಗಳಿರುವ ಬಿಳಿಶರ್ಟ್ ಧರಿಸಿದ್ದರು. ಕೈಯಲ್ಲಿ ವಾಚ್ ಇದೆ. ಮೇಲ್ನೋಟಕ್ಕೆ ಕೂಲಿ ಕಾರ್ಮಿಕರಂತೆ ಕಂಡುಬಂದಿದೆ. ಶವ ಕೊಳೆತ ಸ್ಥಿತಿಯಲ್ಲಿದ್ದು ವ್ಯಕ್ತಿ ಮೃತಪಟ್ಟು ಎರಡು ಇಲ್ಲವೆ ಮೂರು ದಿನಗಳಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಮೂಡುಬಿದಿರೆ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ಒಂದು ವಾರದಿಂದೀಚೆಗೆ ಯಾವುದೇ ನಾಪತ್ತೆ ಪ್ರಕರಣಗಳು ದಾಖಲಾಗದಿದ್ದುದರಿಂದ ಮೃತ ವ್ಯಕ್ತಿ ಮೂಡುಬಿದಿರೆ ವ್ಯಾಪ್ತಿಯ ಹೊರಗಿನವರೆಂದು ಅಂದಾಜಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.