ಬಂಟ್ವಾಳ, ನ.23(Daijiworld News/SS): ನಾವು ಪರಸ್ಪರ ಪ್ರೀತಿ, ಸೌಹಾರ್ದ, ಬಾಂಧವ್ಯದಿಂದ ಕೂಡಿ ಬಾಳಬೇಕು. ಇದುವೇ ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ (ಸ.ಅ.) ರ ಇಚ್ಛೆಯಾಗಿದೆ ಎಂದು ಗಡಿಯಾರ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ದಾರಿಮಿ ಹೇಳಿದ್ದಾರೆ.
ಅವರು ಬಂಟ್ವಾಳ ತಾಲೂಕಿನ ಬುಡೋಳಿ ಏನಾಜೆ ಮುನೀರುಲ್ ಇಸ್ಲಾಂ ಎಜುಕೇಶನಲ್ ಸೆಂಟರ್ (ರಿ) ವತಿಯಿಂದ ಪ್ರವಾದಿ ಮುಹಮ್ಮದ್ (ಸ.ಅ.) ರ ಜನ್ಮದಿನಾಚರಣೆಯ ತಿಂಗಳಿನ ಪ್ರಯುಕ್ತ ಏನಾಜೆ ಮಸೀದಿ ವಠಾರದಲ್ಲಿ ನಡೆದ 'ಮೀಲಾದ್ ಫೆಸ್ಟ್ -2019' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಬದುಕುವುದೇ ಜೀವನ. ಇಸ್ಲಾಂ ಧರ್ಮ ಹೇಳಿದ ರೀತಿಯಲ್ಲಿ ಜೀವನ ಸಾಗಿಸುವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಗುರು ಅಬ್ದುಲ್ ಮಜೀದ್ ದಾರಿಮಿ, ಪ್ರವಾದಿಯವರ ಜೀವನದ ಹಾದಿ ನಮಗೆ ಸದಾ ಪ್ರೇರಣೆ. ನಬಿ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮದ ಮುಂಚೆ ಏನಾಜೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆಯಿತು. ಎರಡನೇ ತರಗತಿಯ ಮೂರು ದರ್ಸ್ ವಿದ್ಯಾರ್ಥಿಗಳಿಂದ ನಡೆದ ಬುರ್ದಾ ಕಾರ್ಯಕ್ರಮ ಮನಸೆಳೆಯಿತು. ದರ್ಸ್ ವಿದ್ಯಾರ್ಥಿನಿ ಹಫೀಝಾ ರಚಿಸಿದ ಇಸ್ಲಾಮಿಕ್ ಕಲಾಕೃತಿ ಬಿಡುಗಡೆಗೊಂಡಿತು. ಇದೇ ವೇಳೆ ವಿವಿಧ ವಿಭಾಗಗಳಲ್ಲಿ ನಡೆದ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಸರ್ಟಿಫಿಕೆಟ್ ವಿತರಿಸಿ ಗೌರವಿಸಲಾಯಿತು. ಮಾತ್ರವಲ್ಲ ಏನಾಜೆ ದರ್ಸ್'ನ ಮೂವರು ಅಧ್ಯಾಪಕರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಿ.ಕೆ.ಅಬ್ಬು ಹಾಜಿ, ಬಶೀರ್ ಏನಾಜೆ, ಉಮರ್ ಏನಾಜೆ, ಅಶ್ರಫ್ ಮುಸ್ಲಿಯಾರ್, ಅಬೂಬಕ್ಕರ್ ಸಿದ್ದೀಕ್, ಇಸ್ಮಾಯಿಲ್ ಈಚು, ಮುಹಮ್ಮದ್ ಅಶ್ರಫ್ ಸತ್ತಿಕಲ್ಲು, ಇಸ್ಮಾಯಿಲ್, ಹನೀಫ್ ದರ್ಸಿ, ಅಬ್ದುಲ್ಲಾ ಅನಿತಾ ಸೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರು ಕೂಡಾ ಉಪಸ್ಥಿತರಿದ್ದರು. ಕೈಸ್ ಅಹ್ಮದ್ ಕಿರಾಅತ್ ಪಠಿಸಿದರು. ಹಿರಿಯ ಅಧ್ಯಾಪಕ ಉಸ್ಮಾನ್ ದಾರಿಮಿ ಸ್ವಾಗತಿಸಿದರು. ಪತ್ರಕರ್ತ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.