ಮಂಗಳೂರು, ನ 24(Daijiworld News/MB) : ಕಟೀಲು ದೇವಸ್ಥಾನ ರಥಬೀದಿಯಲ್ಲಿ ಆಯೋಜಿಸಿದ್ದ ಕಟೀಲು ಯಕ್ಷಗಾನ ಮೇಳಗಳ ಈ ಋತುವಿನ ತಿರುಗಾಟದ ಮೊದಲ ಯಕ್ಷಗಾನದಲ್ಲಿ ಯಕ್ಷಗಾನದ ನಡೆಯುತ್ತಿದ್ದ ಸಮಯದಲ್ಲಿ ಭಾಗವತಿಕೆ ನಡೆಸಲು ಬಂದ ಪಟ್ಲ ಸತೀಶ್ ಶೆಟ್ಟಿಯವರನ್ನು ಎಬ್ಬಿಸಿ ಕಳುಹಿಸಲಾಗಿತ್ತು. ಈ ಕುರಿತು ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರು ಸ್ಪಷ್ಟನೆಯನ್ನು ನೀಡಿದ್ದಾರೆ.
ನವೆಂಬರ್ 22 ರ ಶುಕ್ರವಾರ ರಾತ್ರಿ 12:30 ಗಂಟೆಗೆ ಸತೀಶ್ ಅವರು ಚೌಕಿಗೆ ಬಂದಿದ್ದು, ಪ್ರಸಾದ ಸ್ವೀಕರಿಸಿ ನಾನು ಅಲ್ಲೇ ಇದ್ದರೂ ಮಾತಾನಾಡಿಸದೇ ಹೋದರು. ಬಳಿಕ ನಾನೇ ಅವರನ್ನು ವಾಪಾಸ್ ಕರೆಸಿ ಚೌಕಿಯಲ್ಲಿ ಎಲ್ಲರ ಸಮ್ಮುಖದಲ್ಲೇ ನೀವು ಈ ಬಾರಿ ಭಾಗವತಿಕೆ ಮಾಡುವುದು ಬೇಡ ಎಂದು ತಿಳಿಸಿದ್ದೇನೆ. ಅಲ್ಲಿಂದ ಹೋದವರು ಸುಮಾರು ಅರ್ಧ ಗಂಟೆ ಬಿಟ್ಟು ಏಕಾಏಕಿ ರಂಗ ಸ್ಥಳವನ್ನು ಪ್ರವೇಶ ಮಾಡಿದ್ದಾರೆ. ನಾನು ಕ್ರಮಾನುಸಾರವಾಗಿ ಅವರನ್ನು ವಾಪಾಸ್ ಕರೆದಿದ್ದೇನೆ. ಅವರಿಗೆ ಈ ಮೊದಲು ಸೂಚನೆ ನೀಡಿದೆ. ಆದರೂ ಅವರು ಉದ್ದೇಶಪೂರ್ವಕವಾಗಿ ರಂಗಸ್ಥಳಕ್ಕೆ ಹೋಗಿದ್ದಾರೆ. ಅವರು ತಮಗೆ ಯಾವ ಸೂಚನೆಯನ್ನು ನೀಡಿಲ್ಲ ಎಂಬ ಹೇಳಿಕೆ ನೀಡಿದ್ದು ಆ ಹೇಳಿಕೆ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದರು.
ಪಟ್ಲ ಸತೀಶ್ ಶೆಟ್ಟಿಯವರು ಮೇಳಕ್ಕೆ ಸಂಬಂಧಿಸಿದ ಯಾವುದೇ ಪಾಲಿಸದೇ ಇರುವುದರಿಂದ ಮತ್ತು ಮೇಳದ ಸಂಚಾಲಕರು ಮತ್ತು ಆಡಳಿತದ ವಿರುದ್ಧವೇ ಬಹಿರಂಗವಾಗಿ ಹೇಳಿಕೆ ನೀಡಿದ್ದರಿಂದ ಅವರನ್ನು ಈ ವರ್ಷದ ತಿರುಗಾಟದಿಂದ ಹೊರಗಿಡಲಾಗುವುದು ಎಂದು ನಿರ್ಧಾರ ಮಾಡಲಾಗಿತ್ತು. ಈ ವಿಷಯ ಸತೀಶ್ ಅವರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೇ ಅವರು ಈ ಕುರಿತು ನಮ್ಮೊಂದಿಗೆ ಮಾತಾನಾಡಬಹುದಿತ್ತು. ಆದರೆ ಈ ಕುರಿತು ಅವರು ಮಾತಾನಾಡಿಲ್ಲ. ಅವರು ಮೇಳಕ್ಕೆ ಸಂಬಂಧಿಸಿದ ಯಾವುದೇ ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಮೇ ೨೫ ರ ಪತ್ತೆನಾಜೆಯಂದು ಮೇಳದ ತಿರುಗಾಟ ಮುಗಿದ ಬಳಿಕ ಭಾಗಿಯಾಗಿಲ್ಲ. ಸೇವೆ ದಿನ ಗೆಜ್ಜೆ ಕಟ್ಟುವಾಗಲೂ ಬಂದಿಲ್ಲ. ಹಾಗೆಯೇ ಕಲಾವಿದರ ಸಂಬಳ ಬಟವಾಡೆ, ಅಡ್ವಾನ್ಸ್ ವಿತರಣೆ ಸಂದರ್ಭದಲ್ಲೂ ಭಾಗಿಯಾಗಿಲ್ಲ. ಅಷ್ಟಮಿಯಂದು ಮಳೆಗಾಲದ ಗೌರವಧನ ನೀಡಲಾಗುವುದು, ಆದರೆ ಅದಕ್ಕೂ ಸತೀಶ್ ಅವರು ಬಂದಿಲ್ಲ. ಹಾಗಾಗೀ ಅವರ ಹೆಸರನ್ನು ಕ್ಷೇತ್ರದ ಆರು ಮೇಳಗಳಿಂದಲೂ ತೆಗೆಯಲಾಗಿತ್ತು ಎಂದು ತಿಳಿಸಿದ್ದಾರೆ.