ಹಾಸನ ಜ 14 : ಸಂಕ್ರಾತಿ ಸಂಭ್ರಮದಲ್ಲಿದ್ದ ಬಾಲಕನನ್ನು ಒಂಟಿ ಸಲಗವೊಂದು ಎಳೆದೊಯ್ದು ಕೊಂದು ಹಾಕಿದ ದಾರುಣ ಘಟನೆ ಜ 14 ರ ಭಾನುವಾರ ನಡೆದಿದೆ.ಆಲೂರು ತಾಲೂಕಿನ ಕೊಡಗತ್ತನಹಳ್ಳಿ ಎಂಬಲ್ಲಿ ಈ ಘಟನೆ ನಡೆದಿದ್ದು, ಹಬ್ಬಕ್ಕಾಗಿ ಬಾಲಕ ಅಜ್ಜಿ ಮನೆಗೆ ಬಂದಿದ್ದ. ಮೃತ ದುರ್ದೈವಿ 14 ವರ್ಷದ ಭರತ್ ಎಂದು ಗುರುತಿಸಲಾಗಿದೆ. ಮನೆಯ ಮುಂದೆ ನಿಂತಿದ್ದ ಬಾಲಕನನ್ನು ಸಲಗ ಎಳೆದುಕೊಂಡು ಹೋಗಿ ಕೊಂದು ಹಾಕಿದೆ. ಮನೆ ಮುಂದೆ ಆಡುತ್ತಿದ್ದ ಬಾಲಕ ಕಾಣದೇ ಇದ್ದುದರಿಂದ ಆತಂಕಕ್ಕೀಡಾದ ತಾಯಿ ಮತ್ತು ಅಜ್ಜಿ ಜಯಮ್ಮ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೃತ ಭರತ್ ನ ಮೃತದೇಹ ಪತ್ತೆಯಾಗಿದೆ. ಇನ್ನು ಕೊಡಗತ್ತನಹಳ್ಳಿಯಲ್ಲಿ ಆನೆ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ದೌಡಾಯಿಸಿದ್ದಾರೆ.