ಮಂಗಳೂರು, ನ.25(Daijiworld News/SS): ಒಂದು ಸಮುದಾಯ ಅಭಿವೃದ್ಧಿ ಕಾಣಬೇಕಾದರೆ ಆ ಸಮುದಾಯ ಸ್ತ್ರೀಯರು ಜಾಗೃತರಾಗಿತಬೇಕು. ಇದೀಗ ಕೆಥೋಲಿಕ್ ಸಭಾ ಕ್ರೈಸ್ತ ಸ್ತ್ರೀಯರ ಸಮಾವೇಶ ಹಮ್ಮಿಕೊಂಡಿದ್ದು ಸಮುದಾಯದಲ್ಲಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್'ನ ಧರ್ಮಗುರು ಡಾ.ಜೆ.ಬಿ.ಸಲ್ದಾನ ಅಭಿಪ್ರಾಯಪಟ್ಟರು.
ರಾಣಿಪುರ ಚರ್ಚ್ ವಠಾರದಲ್ಲಿ ಕೆಥೋಲಿಕ್ ಸಭಾ ಮಂಗಳೂರು ದಕ್ಷಿಣ ವಲಯ ಮತ್ತು ರಾಣಿಪುರ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಉಳ್ಳಾಲ ವಲಯ ಕ್ರೈಸ್ತ ಮಹಿಳಾ ಸಮಾವೇಶ ಮತ್ತು ಸರ್ಕಾರಿ ಸವಲತ್ತುಗಳ ಮಾಹಿತಿ, ಜಾಗೃತಿ ಹಾಗೂ ನೊಂದಾವಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜ, ಸಮುದಾಯದ ಭದ್ರತೆ ನಿಟ್ಟಿನಲ್ಲಿ ಕೆಥೋಲಿಕ್ ಸಭಾ ಕಾರ್ಯ ನಿರ್ವಹಿಸಬೇಕಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದು ಅರ್ಹರಿಗೆ ತಲುಪಿಸುವ ಕಾರ್ಯ ಸಂಘಟನೆ ಮಾಡಬೇಕು. ಸ್ಮಾರ್ಟ್ ಸಿಟಿ ನಿರ್ಮಾಣದಲ್ಲಿ ಯುವಸಮುದಾಯಕ್ಕೆ ಸಾಕಷ್ಟು ಜವಾಬ್ದಾರಿಯಿದ್ದು ಈ ಅವಕಾಶ ಸಮರ್ಪಕವಾಗಿ ಬಳಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉದ್ಯಮ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಜ್ಯೋತಿ ಸಿಂತಿಯಾ ಡಿಸೋಜ ಪೆರ್ಮನ್ನೂರು, ಕೃಷಿ ಕ್ಷೇತ್ರದಲ್ಲಿ ಏವ್ಯ್ಲಿನ್ ಡೇಸಾ ಪಾನೀರು ಮತ್ತು ಸಮಾಜ ಸೇವೆಯಲ್ಲಿ ಟ್ರೇಸಿ ರೊಡ್ರಿಗಸ್ ಅಮ್ಮೆಂಬಳ ಅವರನ್ನು ಸನ್ಮಾನಿಸಲಾಯಿತು.
ಕೆಥೋಲಿಕ್ ಸಭಾ ಮಂಗಳೂರು ದಕ್ಷಿಣ ವಲಯಾಧ್ಯಕ್ಷ ಫೆಲಿಕ್ಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೌಶಲ್ಯ ಇಲಾಖೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಐರಿನ್ ರೆಬೊಲ್ಲೊ ಮತ್ತು ಮಂಗಳೂರು ಡಿಜಿಟಲ್ ಸೇವಾ ಕೇಂದ್ರದ ಅರುಣ್ ಜೋನ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕಥೋಲಿಕ್ ಸಭಾ ಮಂಗಳೂರು ಪ್ರದೇಶ ನಿರ್ದೇಶಕ ಫಾ.ಮ್ಯಾಥ್ಯೂ ವಾಸ್ ಮತ್ತು ಫಾ.ಆಲ್ಫ್ರೇಡ್ ಮಿನೇಜಸ್, ರಾಣಿಪುರ ಚರ್ಚ್ ಪ್ರಧಾನ ಧರ್ಮಗುರು ಫಾ.ಸಂತೋಷ್ ಡಿಸೋಜ, ಮಂಗಳೂರು ಪ್ರದೇಶ್ ಕೆಥೋಲಿಕ್ ಸಭಾ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತಾ, ನಿಕಟಪೂರ್ವ ಅಧ್ಯಕ್ಷ ಅನಿಲ್ ಲೋಬೋ, ರಾಣಿಪುರ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಡಿಸೋಜ, ಕಾರ್ಯದರ್ಶಿ ಲೆತೀಶಿಯಾ ಡಿಸೋಜ, ಕೆಥೋಲಿಕ್ ಸಭಾ ದಕ್ಷಿಣ ವಲಯ ನಿಕಟಪೂರ್ವ ಅಧ್ಯಕ್ಷ ಅರುಣ್ ಮೊಂತೆರೋ, ಕಾರ್ಯದರ್ಶಿ ಜೋಸ್ಲಿನ್ ಡಿಸೋಜ, ರಾಣಿಪುರ ಘಟಕಾಧ್ಯಕ್ಷ ಆಲ್ವಿನ್ ಡಿಸೋಜ, ಕಾರ್ಯದರ್ಶಿ ಮೆಟಿಲ್ಡಾ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.