ಮಂಗಳೂರು, ನ 25 (Daijiworld News/MB) : ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ.ಖಾದರ್ ಅವರಿಗೆ ಜೀವ ಬೆದರಿಕೆ ಇರುವುದರ ಕುರಿತು ರಾಜ್ಯ ಗೃಹ ಇಲಾಖೆಗೆ ಮಾಹಿತಿ ದೊರೆತಿದ್ದು, ಈ ನಿಟ್ಟಿನಲ್ಲಿ ಯು.ಟಿ.ಖಾದರ್ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನದ ಆರೋಪಿಯಾದ ಮತೀಯವಾದಿ ಸಂಘಟನೆಯ ಕಾರ್ಯಕರ್ತ ಫರ್ಹಾನ್ ಪಾಷಾನನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ಖಾದರ್ ಗೂ ಜೀವ ಬೆದರಿಕೆ ಇರುವ ಮಾಹಿತಿ ತಿಳಿದುಬಂದಿದ್ದು ಈ ಹಿನ್ನಲೆಯಲ್ಲಿ ಶಾಸಕ ಯು.ಟಿ.ಖಾದರ್ ಅವರಿಗೆ ಭದ್ರತೆ ಒದಗಿಸಲಾಗಿದೆ.
ಶಾಸಕ ತನ್ವೀರ್ ಸೇಠ್ ಅವರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅಲ್ಲಿ ಅವರ ಮೇಲೆ ಹತ್ಯೆ ಯತ್ನ ನಡೆದಿದ್ದು ತನ್ವೀರ್ ಸೇಠ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಮತೀಯವಾದಿ ಸಂಘಟನೆಯು ಮುಸ್ಲಿಂ ಜಾತ್ಯಾತೀತ ನಾಯಕರನ್ನು ಗುರಿಯಾಗಿಸಿಕೊಂಡು ಈ ಕೃತ್ಯಕ್ಕೆ ಮುಂದಾಗಿದೆ ಎಂದು ಗೃಹ ಇಲಾಖೆಗೆ ಮಾಹಿತಿ ಲಭಿಸಿದ್ದು ತನ್ವೀರ್ ಸೇಠ್ ಹತ್ಯೆ ಯತ್ನದ ಆರೋಪಿ ಈ ವಿಚಾರವನ್ನು ತಿಳಿಸಿದ ಕೂಡಲೇ ಎಚ್ಚೆತ್ತುಕೊಂಡ ಇಲಾಖೆ ಯು.ಟಿ.ಖಾದರ್ ಅವರಿಗೆ ಗನ್ ಮ್ಯಾನ್ನನ್ನು ನಿಯೋಜನೆ ಮಾಡಿ ಭದ್ರತೆ ಒದಗಿಸಿದೆ.
ಗೃಹ ಸಚಿವ ಎಸ್.ಆರ್.ಬೊಮ್ಮಾಯಿಯವರೇ ಖುದ್ದಾಗಿ ಯು.ಟಿ.ಖಾದರ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಇರುವ ವಿಷಯವನ್ನು ತಿಳಿಸಿದ್ದು ಕೂಡಲೇ ಭದ್ರತೆ ಪಡೆದುಕೊಳ್ಳಲು ತಿಳಿಸಿದ್ದಾರೆ. ಹಾಗೆಯೇ ಮಂಗಳೂರು ನಗರ ಪೊಲೀಸ್ ಕಮೀಷನರ್ ಪಿ.ಎಸ್.ಹರ್ಷ ಕೂಡಾ ಈ ಕುರಿತು ಯು.ಟಿ.ಖಾದರ್ ಅವರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಚುನಾವಣೆಯ ಪ್ರಚಾರದಲ್ಲಿ ಬಿಝಿಯಾಗಿರುವ ಯು.ಟಿ.ಖಾದರ್ ಅವರಿಗೆ ಒಬ್ಬರು ಪೊಲೀಸ್ ಇನ್ಸ್ಪೆಕ್ಟರ್, ಎಸ್.ಐ. ಮತ್ತು ಮೂವರು ಪೊಲೀಸರು ಸೇರಿದಂತೆ ವಿಶೇಷ ಭದ್ರತೆಯನ್ನು ನೀಡಲಾಗಿದೆ. ಖಾದರ್ ಅವರು ಪ್ರಸ್ತುತ ಮೈಸೂರಿನಲ್ಲಿ ಉಪಚುನಾವಣೆಯ ಪ್ರಚಾರದಲ್ಲಿದ್ದಾರೆ.
ಈ ಕುರಿತು ಮಾತಾನಾಡಿರುವ ಶಾಸಕ ಯು.ಟಿ.ಖಾದರ್ ಅವರು "ನಾನು ಸಚಿವನಾಗಿದ್ದಾಗಲೂ ಯಾವುದೇ ಭದ್ರತೆ ಪಡೆದುಕೊಂಡಿಲ್ಲ. ಸಚಿವನಾಗಿದ್ದ ನಾನು ಜನಸಾಮಾನ್ಯರ ಜೊತೆ ಬೆರೆಯಬೇಕು, ಅವರ ಕಷ್ಟಕ್ಕೆ ಸ್ಪಂದನೆ ನೀಡಬೇಕಾದ ಕಾರಣ ಭದ್ರತೆ ಪಡೆದಿರಲಿಲ್ಲ. ಒಬ್ಬ ಗನ್ಮ್ಯಾನ್ನನ್ನು ನಿಯೋಜನೆ ಮಾಡುವಾಗಲೂ ನಾನು ಒಪ್ಪಿರಲಿಲ್ಲ. ಅವರನ್ನು ಹಿಂದೆ ಕಳಿಸಿದ್ದೆ. ಆದರೆ ಈಗ ಜೀವ ಬೆದರಿಕೆಯ ಕಾರಣದಿಂದಾಗಿ ಭದ್ರತೆ ಪಡೆದುಕೊಳ್ಳಬೇಕು ಎಂದು ಹೇಳುವಾಗ ನನಗೆ ಆಶ್ಚರ್ಯವಾಗುತ್ತಿದೆ. ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶ ಇರುವವರು ಭಯಭೀತ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇಂತಹ ಸಂಘಟನೆಗಳು ಮತ್ತು ವ್ಯಕ್ತಿಗಳು ಸಮಾಜಕ್ಕೆ ಉಪಕಾರಿ ಕೆಲಸ ಮಾಡುತ್ತಿಲ್ಲ. ಅಷ್ಟು ಮಾತ್ರವಲ್ಲದೇ ದೇಶದ ಪರವಾಗಿಯೂ ಇಲ್ಲ. ಇಂತಹ ಸಂಘಟನೆಗಳನ್ನು ಜನರು ದೂರ ಇಡಬೇಕು ಎಂದು ಹೇಳಿದ್ದಾರೆ.
ತನ್ವೀರ್ ಸೇಠ್ ಹತ್ಯೆಯ ಹಿಂದೆ ಎಸ್.ಡಿ.ಪಿ.ಐ. ಕೈವಾಡ ಇರುವ ಮಾಹಿತಿ ಬೆಳಕಿಗೆ ಬಂದಿದೆ.