ಮಂಗಳೂರು, ನ 25 (Daijiworld News/MSP): ಸಾದಾ ಟ್ರೋಲ್ ಆಗುತ್ತಿರುವ ಪಂಪ್ ವೆಲ್ ಫ್ಲೈ ಓವರ್ ನ ನಿಧಾನಗತಿಯ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸಂಸದರ ಗಮನ ಸೆಳೆಯುವ ನಿಟ್ಟಿನಲ್ಲಿ ಎಂಸಿಸಿ ಸಿವಿಕ್ ಗ್ರೂಪ್ ನ.24 ರ ಭಾನುವಾರ ನಡೆಸಬೇಕಾಗಿದ್ದ ಗಾಳಿಪಟ ಪ್ರತಿಭಟನೆಗೆ ನಗರ ಪೊಲೀಸ್ ಇಲಾಖೆ ಏಕಾಏಕಿ ಅನುಮತಿ ನಿರಾಕರಿಸಿದೆ.
ಗಾಳಿಪಟ ಹಾರಿಸುವ ಪ್ರತಿಭಟನೆಗೆ ಸಾರ್ವಜನಿಕರು ತಮ್ಮ ವಿವಿಧ ವಿಭಿನ್ನ ಗಾಳಿಪಟಗಳನ್ನು ತಂದು ಮೇಲ್ಸೇತುವೆಯ ಮೇಲೆ ನಿಂತು ಹಾರಿಸಬಹುದು ಮತ್ತು ಇತರೆ ಸಂಘಟನೆಗಳು ಇದರಲ್ಲಿ ಸೇರಿಕೊಳ್ಳಬಹುದು ಎಂದು ಸಿವಿಕ್ ಗ್ರೂಪ್ ಕರೆ ನೀಡಿತ್ತು. ಆದರೆ ಶನಿವಾರ ಏಕಾಏಕಿ ಅನುಮತಿ ನಿರಾಕರಿಸಿದ ಕಂಕನಾಡಿ ಪೊಲೀಸರು," ಪ್ರಸ್ತುತ ಆಯೋಧ್ಯೆ ತೀರ್ಪು ಹಿನ್ನಲೆಯಲ್ಲಿ ಕಾನೂನು ಸುವ್ಯಸ್ಥೆ ಹಿತದೃಷ್ಟಿಯಿಂದ ಅನುಮತಿ ನಿರಾಕರಿಸಿಲಾಗಿದೆ ಎಂದು ಲಿಖಿತವಾಗಿ ಹೇಳಿದ್ದಾರೆ. ಪೊಲೀಸರ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ನೆಟ್ಟಿಗರ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕಾಮಗಾರಿ ವಿಳಂಬ ಪ್ರತಿಭಟನೆಗೂ ಅಯೋಧ್ಯೆ ತೀರ್ಪಿಗೂ ಏನು ಸಂಬಂಧ ಎಂದು ಪ್ರಶ್ನೆ ವ್ಯಕ್ತವಾಗಿದೆ.
ಪೊಲೀಸ್ ಅನುಮತಿ ನಿರಾಕರಣೆ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಸಿವಿಕ್ ಗ್ರೂಪ್ ಮುಂದೂಡಿದೆ. ಮುಂದಿನ ದಿನಾಂಕವನ್ನು ಪ್ರಕಟಿಸಿಲ್ಲ.