ಮಲ್ಪೆ, ನ 25 (Daijiworld News/MB) : ಮಲ್ಪೆ ಬೀಚ್ ಗೆ ವಿಹಾರಕ್ಕೆಂದು ಬಂದಿದ್ದ ಕೇರಳ ಮೂಲದ ನಾಲ್ವರು ಕೊನೆಯ ಬೋಟ್ ತಪ್ಪಿದ ಕಾರಣದಿಂದಾಗಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲೇ ಒಂದು ರಾತ್ರಿಯನ್ನು ಕಳೆದಿದ್ದಾರೆ.
ಕೇರಳದ ಕೊಚ್ಚಿನ್ ನಿವಾಸಿಗಳಾದ ಇವರು ಒರ್ವ ಮಹಿಳೆ ಸೇರಿ ನಾಲ್ವರಿದ್ದು ಜಸ್ಟಿನ್(34), ಶೀಜಾ(33), ಜೋಶ್ (28) ಮತ್ತು ಹರೀಶ್(17) ಎಂಬವರು ಈಡೀ ರಾತ್ರೆ ಸಮುದ್ರ ಮಧ್ಯದಲ್ಲೇ ಉಳಿದಿದ್ದು, ಬೆಳಿಗ್ಗೆ 7:30 ಗಂಟೆಗೆ ಸುರಕ್ಷತವಾಗಿ ತೀರಕ್ಕೆ ಕರೆದುಕೊಂಡು ಬರಲಾಗಿದ್ದು, ಮಲ್ಪೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಅವರನ್ನು ಕೇರಳಕ್ಕೆ ಕಳುಹಿಸಿದ್ದಾರೆ.
ಪೊಲೀಸರು ನಡೆಸಿದ ವಿಚಾರಣೆ ವೇಳೆ ಜಸ್ಟಿನ್ ಹಾಗೂ ಶೀಜಾ ಕೇರಳದಲ್ಲಿ ಹೋಂಸ್ಟೇಯಂತಹ ಸಣ್ಣ ಉದ್ಯಮ ನಡೆಸುತ್ತಿದ್ದು, ಜೋಶ್ ಅವರಲ್ಲಿ ಕೆಲಸಕ್ಕೆ ಇದ್ದ ಎನ್ನಲಾಗಿದ್ದು, ಹರೀಶ್ ೧೭ ವರ್ಷದೊಳಗಿನ ಕೊಚ್ಚಿನ್ ಫುಟ್ ಬಾಲ್ ಅಕಾಡೆಮಿಯ ಗೋಲ್ ಕೀಪರ್ ಎಂದು ತಿಳಿದುಬಂದಿದೆ.
ಈ ನಾಲ್ವರು ಕೇರಳದಿಂದ ನವೆಂಬರ್ 21ರಂದು ರೈಲಿನಲ್ಲಿ ಉಡುಪಿಗೆ ಹೊರಟು ಬಂದಿದ್ದು, ಉಡುಪಿಯ ಕೆಲವೆಡೆ ಭೇಟಿ ನೀಡಿ 22ರಂದು ಗೋವಾಕ್ಕೆ ತೆರಳಿದ್ದಾರೆ. ಬಳಿಕ ಅಲ್ಲಿಂದ ಪುನಃ 23ರಂದು ಉಡುಪಿಗೆ ಬಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಬೋಟ್ ಮೂಲಕ ಸೈಂಟ್ ಮೇರಿಸ್ ದ್ವೀಪಕ್ಕೆ ಮಧ್ಯಾಹ್ನ 12:30 ಗಂಟೆಗೆ ತಲುಪಿದ್ದಾರೆ. ದ್ವೀಪದಲ್ಲೆ ಇದ್ದ ಇವರು ಅಲ್ಲಿಂದ ಹತ್ತಿರದ ಸಣ್ಣ ದ್ವೀಪಕ್ಕೆ ಹೋಗಿದ್ದು ಸಂಜೆಯಾದಾಗ ಆ ಕಿರು ದ್ವೀಪದ ಸುತ್ತ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಅಲ್ಲಿಂದ ಬರಲು ಅವರಿಗೆ ಸಾಧ್ಯವಾಗಿಲ್ಲ. ನೀರಿನ ಮಟ್ಟ ಇಳಿಕೆಯಾದ ನಂತರ ಅಲ್ಲಿಂದ ಬೋಟ್ ಹೊರಡುವ ಸ್ಥಳಕ್ಕೆ ಈ ನಾಲ್ವರು ಬಂದಿದ್ದಾರೆ. ಆದರೆ ಕೊನೆಯ ಬೋಟ್ 6:45ರ ಸುಮಾರಿಗೆ ಅಲ್ಲಿಂದ ಹೊರಟಿದೆ. ಬೋಟ್ ಗಾಗಿ ಕಾದ ಇವರಿಗೆ ಕೊನೆಯ ಬೋಟ್ ಹೋದ ವಿಷಯ ತಿಳಿದಿದ್ದು ಕೇರಳ ಮೂಲದವರಾದ ಇವರಿಗೆ ಪರಿಚಯಸ್ಥರು ಯಾರೂ ಇಲ್ಲದ ಕಾರಣ ದ್ವೀಪದಲ್ಲೆ ರಾತ್ರಿ ಕಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿಯೆಲ್ಲಾ ಅಲ್ಲೇ ಇದ್ದ ಇವರು ಬೆಳಿಗ್ಗೆ ಬೋಟ್ ಗಮನಕ್ಕೆ ಬರುವವರೆಗೂ ಫೋಟೋ ಕ್ಲಕ್ಕಿಸಿದ್ದಾರೆ ಎಂದು ಮೊಬೈಲ್ ತಪಾಸಣೆ ವೇಳೆ ತಿಳಿದು ಬಂದಿದೆ.
ಭಾನುವಾರ ಬೆಳಿಗ್ಗೆ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗಿದ್ದ ಬೋಟ್ನವರು ಈ ನಾಲ್ವರನ್ನು ಗಮನಿಸಿದ್ದು ವಿಚಾರಸಿ ದ್ವೀಪಕ್ಕೆ ಕರೆದುಕೊಂಡು ಬಂದಿದ್ದು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿಯಲ್ಲಿ ದ್ವೀಪದಲ್ಲಿ ನಿಲ್ಲಲು ಅವಕಾಶ ಇಲ್ಲದ ಕಾರಣ ಪೊಲೀಸರು ಈ ನಾಲ್ವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಗುರುತಿನ ಚೀಟಿ, ರೈಲ್ವೇ ಟಿಕೆಟ್, ಬೋಟ್ ಟಿಕೆಟ್ ಪರಿಶೀಲನೆ ಮಾಡಿ ಸದ್ಯ ನಾಲ್ವರನ್ನು ಕೇರಳಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತಾನಾಡಿರುವ ಉಡುಪಿ ಎಸ್ಪಿ ನಿಶಾ ಜೇಮ್ಸ್ " ಬೋಟ್ ತಪ್ಪಿ ನಾಲ್ವರು ದ್ವೀಪದಲ್ಲೆ ಉಳಿದ ವಿಷಯ ವಿಚಾರಣೆಯ ವೇಳೆ ತಿಳಿದು ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿ ಕೇರಳ ರಾಜ್ಯ ಪೊಲೀಸರಿಂದ ಮಾಹಿತಿ ಕಲೆ ಹಾಕಲಾಗಿದೆ. ಕೇರಳ ಪೊಲೀಸರು ನೀಡಿರುವ ಹೇಳಿಕೆ ಹೊಂದಾಣಿಕೆ ಆದ ಕಾರಣದಿಂದ ಆ ನಾಲ್ವರನ್ನು ಕೇರಳಕ್ಕೆ ಕಳುಹಿಸಲಾಗಿದೆ. ಈ ವಿಚಾರದಲ್ಲಿ ಮೇಲ್ನೋಟಕ್ಕೆ ಟೆಂಡರ್ ವಹಿಸಿಕೊಂಡಿರುವ ಪ್ರವಾಸಿ ಬೋಟ್ ನ ನಿರ್ಲಕ್ಷ ಸಾಬೀತಾಗಿದ್ದು ಈ ಕುರಿತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ವಿಚಾರಣೆ ನಡೆಸಲು ಕೇಳುತ್ತೇವೆ ಎಂದು ಹೇಳಿದ್ದಾರೆ.