ಮಂಗಳೂರು, ನ 25 (Daijiworld News/MB) : ಪಾದುವ ಥಿಯೇಟರ್ ಹಬ್ ನಲ್ಲಿ 'ಲೋಗೋಸ್ ಥಿಯೇಟರ್ ಟ್ರೂಪ್' ಆಯೋಜಿಸಿದ 'ಲೋಗೋಸ್’ ನಾಟಕೋತ್ಸವ ನವೆಂಬರ್ 23 ರ ಶನಿವಾರ ಚಾಲನೆಗೊಂಡಿದೆ.
ಮೊದಲನೇ ದಿನ ನಾಟ್ಯರಂಗ ಪುತ್ತೂರು ಪ್ರಸ್ತುತಪಡಿಸಿದ, ಮಂಜುಳಾ ಸುಬ್ರಹ್ಮಣ್ಯ ಅಭಿನಯಿಸಿದ ರಾಧಾ ನಾಟಕ ಪ್ರದರ್ಶನಗೊಂಡಿತು.
ಸುಧಾ ಅಡುಕಳ ನಾಟಕದ ರಚನೆ ಮಾಡಿದ್ದು, ಡಾ. ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ. ಏಕವ್ಯಕ್ತಿ ರಂಗಪ್ರಯೋಗ ಇದಾಗಿದ್ದು ಸುಮಾರು 60 ನಿಮಿಷಗಳ ಕಾಲ ಪ್ರದರ್ಶನಗೊಂಡಿದೆ.
ನಾಟಕದ ಸಂಗೀತ ನಿರ್ವಹಣೆ ಬಿನು ಬಾಲಕೃಷ್ಣ ಮಾಡಿದ್ದು , ಆಹಾರ್ಯಂ ಸಂಸ್ಥೆ ತಾಂತ್ರಿಕತೆಯಲ್ಲಿ ಸಹಕಾರ ನೀಡಿದೆ.
ನಾಟಕೋತ್ಸವಕ್ಕೆ ಹಾಗೂ ಲೋಗೋಸ್ ನಾಟಕ ತಂಡಕ್ಕೆ ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವರಾವ್ ಶುಭಕೋರಿದರು. ಪಾದುವ ರಂಗ ಅಧ್ಯಯನ ಕೇಂದ್ರದ ಕ್ರಿಸ್ಟೋಫರ್ ಸ್ವಾಗತಿಸಿದರು.
ಭಾನುವಾರ ಕ್ರಿಸ್ಟೋಫರ್ ಹಾಗೂ ಕ್ಲ್ಯಾನ್ವಿನ್ ನಟಿಸಿರುವ ಝುಜ್ (ಕೊಂಕಣಿ ನಾಟಕ) ಪ್ರದರ್ಶನಗೊಂಡಿದ್ದು ಮೂರು ದಿನಗಳ ಕಾಲ ನಡೆಯುವ ಈ ನಾಟಕೋತ್ಸವದಲ್ಲಿ ಎರಡು ಕೊಂಕಣಿ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರಕಟನೆ ತಿಳಿಸಿದೆ.
ಇಂದು ಆಂಕ್ವಾರ್ ಮೆಸ್ತ್ರಿ (ಕೊಂಕಣಿ ನಾಟಕ) ನಾಟಕ ಪ್ರದರ್ಶನವಾಗಲಿದೆ.