ಮಂಗಳೂರು, ನ 25 (Daijiworld News/MSP): ನವೆಂಬರ್ 23 ರಂದು ಕಟೀಲು ದೇವಾಲಯದ ಆವರಣದಲ್ಲಿ ನಡೆದ ಸೇವೆಯಾಟದ ಸಂದರ್ಭದಲ್ಲಿ ತಮ್ಮನ್ನು ಅವಮಾನಿಸಿದ್ದಕ್ಕಾಗಿ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ಅವರ ತಂಡದ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ನ.25ರ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಕಟೀಲು ಮೇಳದಿಂದ ಕೈಬಿಟ್ಟಿರುವ ವಿಚಾರ ಮೊದಲೇ ತಿಳಿದಿರಲಿಲ್ಲ. ಈ ಬಗ್ಗೆ ನಾನು ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದ, ರಂಗಸ್ಥಳದಿಂದ ಕೆಳಗಿಳಿಸಿರುವುದು ಪೂರ್ವ ನಿರ್ಧಾರಿತ ಷಡ್ಯಂತ್ರ ಎಂದು ಹೇಳಿದ್ದಾರೆ.
ಭಾನುವಾರ ದೇವಿ ಪ್ರಸಾದ್ ಶೆಟ್ಟಿ ಅವರು ಪತ್ರಿಕಾಗೋಷ್ಠಿ ನಡೆಸಿ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಮೇಳದಿಂದ ಹೊರಗಿಡುವ ಬಗ್ಗೆ ನನಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದಾರೆ ಎನ್ನುವುದು ಕೂಡಾ ಸುಳ್ಳು. ಹರಿನಾರಾಯಣ ಅಸ್ರಣ್ಣ ಕೂಡ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ ನನ್ನ ಹೆಸರು ಕೆಡಿಸುವ ತಂತ್ರ ಹೂಡಿದ್ದಾರೆ ಎಂದರು.
ಮೇಳದಲ್ಲಿ ನಾನು ಕಳೆದ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಯಾವತ್ತೂ ಕೂಡಾ ಮೇಳದ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಹೋಗಿಲ್ಲ ಅಲ್ಲದೆ ನನ್ನ ವಿರುದ್ಧ ಈವರೆಗೆ ಒಂದೇ ಒಂದು ದೂರು ಬಂದಿಲ್ಲ. ನನ್ನ ಜನಪ್ರಿಯತೆ ಅವರಿಗೆ ಸಹಿಸಲು ಸಾಧ್ಯವಾಗದೇ ಇರಬಹುದು, ಹೀಗಾಗಿ ನನ್ನ ಹೆಸರಿಗೆ ಕಳಂಕ ತರುವ ಕೆಲಸವಾಗಿದೆ, ನಾನು ಕಟೀಲು ಮೇಳದ ಯಾವುದೇ ನಿಯಮ ಮೀರಿಲ್ಲ ಎಂದರು, ಒಂದು ವೇಳೆ ನಾನು ನಿಯಮ ಮೀರಿರೋದಾದ್ರೆ ಸಾಕ್ಷಿ ಸಮೇತ ವಿವರ ನೀಡಲಿ ಎಂದು ಆಗ್ರಹಿಸಿದರು.
ನನ್ನನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದೂರು ನೀಡಲಿದ್ದೇನೆ ಎಂದ ಅವರು ಮೇಳದ ಆಡಳಿತ ಮಂಡಳಿ ಹೈಕೋರ್ಟ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಮೇಳದ ಆಡಳಿತ ಮಂಡಳಿ ಹಾಗೂ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ವಿರುದ್ದ ಕೋರ್ಟ್ ಗೆ ದೂರು ನೀಡಲಾಗುವುದು ಎಂದು ಹೇಳಿದರು.
ಹೈಕೋರ್ಟ್ ಯಕ್ಷಗಾನ ಮೇಳದ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಮೇಳ ಖಾತೆಗಳನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಶೀಲಿಸುವಂತೆ ನ್ಯಾಯಾಲಯವು ಜಿಲ್ಲಾ ಜಿಲ್ಲಾಧಿಕಾರಿಗೆ ಆದೇಶ ನೀಡಿತ್ತು. ನನ್ನನ್ನು ಮೇಳದಿಂದ ತೆಗೆದು ಹಾಕಲು ಜಿಲ್ಲಾಧಿಕಾರಿಗಳ ಅನುಮತಿ ಪಡೆದಿದ್ದಾರೆಯೇ? ಅವರ ಈ ನಡೆ ನ್ಯಾಯಾಲಯದ ಉಲ್ಲಂಘನೆಯಾಗಿದೆ. ನಾನು ಈ ಘಟನೆಯನ್ನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಈ ವಿಚಾರದ ಕುರಿತಾಗಿ ಸಿಬಿಐ ವಿಚಾರಣೆ ಹಾಗೂ ರಾಜ್ಯ ಅಥವಾ ರಾಷ್ಟ್ರೀಯ ಮಾಧ್ಯಮದಲ್ಲಿ ಚರ್ಚೆಗೂ ಸಿದ್ದನಿದ್ದೇನೆ ಎಂದು ಇದೇ ಸಂದರ್ಭ ಸ್ಪಷ್ಟಪಡಿಸಿದರು.