ಉಡುಪಿ, ನ 25 (Daijiworld News/MSP): ಮರಳುಗಾರಿಕೆಗೆ ಸರಳ ನೀತಿ ಹಾಗೂ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಇ ಸ್ಯಾಂಡ್ ಆ್ಯಪ್ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿ ಜಾರಿಗೆ ತಂದಿದ್ದು ಈ ಯೋಜನೆಗೆ ನ.25 ರ ಸೋಮವಾರ ಜಿಲ್ಲಾಧಿಕಾರಿ ಜಗದೀಶ್ ಹಿರಿಯಡ್ಕದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಆ್ಯಪ್ ಮೂಲಕ ಜನರ ಮನೆಗಳಿಗೆ ಮರಳು ವಿತರಿಸುವ ಕೆಲಸ ಮಾಡುತ್ತಿದ್ದೇವೆ. ಆ್ಯಪ್ ಮೂಲಕ ಮರಳನ್ನು ಬುಕ್ ಮಾಡಿದರೆ ಮನೆಯ ಬಾಗಿಲಿಗೆ ಮರಳು ತಂದು ಹಾಕುತ್ತಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿ ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೊರಗೆ ಮರಳು ಪೂರೈಸಲು ಅವಕಾಶವಿಲ್ಲ ಎಂದರು.ಇದೇ ಸಂದರ್ಭದಲ್ಲಿ ಲಾರಿ ಮಾಲಕರಿಗೆ ಇ-ಸ್ಯಾಂಡ್ ಆ್ಯಪ್ ನ ಪತ್ರವನ್ನು ಲಾರಿ ಡ್ರೈವರಿಗೆ ನೀಡಿದರು.
ಶಾಸಕರಾದ ರಘಪತಿ ಭಟ್ ಈ ಸಂದರ್ಭ ಮಾತನಾಡಿ ಮರಳು ಸಿಗಬೇಕೆಂದು ಜಿಲ್ಲಾಡಳಿತ ಹೋರಾಟ ನಡೆಸಿದ್ದು ಯಶಸ್ವಿಯಾಗಿದೆ. ಕೆಲವೊಂದು ಕಡೆಗಳಲ್ಲಿ ಸ್ಯಾಂಡ್ ಬಾರ್ ಜಾಗವನ್ನು ಗುರುತಿಸಿಲ್ಲ. ಹಿಂದಿನ ಜಿಲ್ಲಾಡಳಿತ ಎಲ್ಲಿ ಸ್ಯಾಂಡ್ ಬಾರನ್ನು ಗುರುತಿಸಬೇಕಿತ್ತೋ ಅಲ್ಲಿ ಗುರುತಿಸಿಲ್ಲ. ಅಲ್ಲದೆ ಮರಳು ದಿಬ್ಬದ ಕೊರತೆ ಇತ್ತು. ಈಗ ಅದನ್ನು ಹೊಸದಾಗಿ ಗುರುತಿಸಿ ತಯಾರಿ ಮಾಡಿದ್ದಾರೆ. ಈಗ ಮರಳಿನ ಸಾಗಾಟ ನಡೆಯುತ್ತಿದೆ ಎಂದರು