ಕಾಸರಗೋಡು, ನ 25 (Daijiworld News/MSP): ಕೇರಳದ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ನ ಮೂವಲಂಕುಳಿ ಚಾಮುಂಡಿ ದೈವವೂ ಭಕ್ತಾಧಿಗಳಿಗೆ ಚಾಟಿಯೇಟು ನೀಡಿರುವ ಕುರಿತು ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿ ಈ ಘಟನೆ ಕುರಿತಂತೆ ವರದಿಯನ್ನು 30 ದಿನಗಳೊಳಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಭಕ್ತರಿಗೆ ಚಾಟಿಯೇಟು ನೀಡುವ ವಿಡಿಯೋ ವೈರಲ್ ಆಗಿತ್ತು. ಮೂವಲಾಂಕುಳಿ ಚಾಮುಂಡಿ ದೈವದ ಕೋಲ ಎಂದರೆ ತೆಯ್ಯಂ ಆಗುವಾಗ ಜನರನ್ನು ಓಡಿಸಿ ಹೊಡೆಯುವ ಸಂಪ್ರದಾಯವಿದೆ. ಈ ದೈವದ ಹೊಡೆತ ತಿನ್ನುವ ಹರಕೆ ಕೂಡಾ ಇದೆ . ವೈರಲ್ ಆದ ವಿಡಿಯೋದಲ್ಲಿ ದೈವದ ಚಾಟಿ ಏಟಿಗೆ 6ಕ್ಕೂ ಹೆಚ್ಚು ಭಕ್ತರಿಗೆ ಗಾಯವಾಗಿತ್ತು ಇದು ಸಂಪ್ರದಾಯವಾಗಿದ್ದು, ಈ ಘಟನೆಯ ವಿರುದ್ದ ದೂರು ನೀಡುವ ಸಂಪ್ರದಾಯವಿಲ್ಲ ಎಂದು ಭಕ್ತಾಧಿಗಳು ಇದರ ಕುರಿತು ಸ್ಪಷ್ಟನೆ ನೀಡಿದ್ದರು.
ಯಾರು ದೂರು ನೀಡದೇ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿದ್ದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದು, ಧಾರ್ಮಿಕ ಆಚರಣೆಗೆ ಆಯೋಗ ಮೂಗು ತೂರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ವೈರಲ್ ಆಗಿರುವ ವೀಡಿಯೊ ಕಾಞಗಾಡ್ನ ಅರಯಿಲ್ ಭಗವತಿ ದೇವಸ್ಥಾನದಲ್ಲಿ ನಡೆದ ಕೋಲದ ವಿಡಿಯೋ ಎನ್ನಲಾಗಿದೆ.