ಮಂಗಳೂರು, ನ 25 (DaijiworldNews/SM): ಭಾರತೀಯ ಸೇನಾ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಗೂ ಮಂಗಳೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ಸೇನಾಧಿಕಾರಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಸುರತ್ಕಲ್ ಸಮೀಪದ ಮಂಜುನಾಥ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ.
ಈತ ತಾನು ಭಾರತೀಯ ಸೇನೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದ. ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಗುಪ್ತದಳಾದ ಅಧಿಕಾರಿಗಳು ಈತ ನಕಲಿ ಎಂಬುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಆರೋಪಿ ಸುರತ್ಕಲ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ತನ್ನನ್ನು ತಾನು ಸೇನೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಸೇನೆಯ ಸಮವಸ್ತ್ರ ಧರಿಸಿಕೊಂಡು ಓಡಾಡುತ್ತಿದ್ದ. ಅಲ್ಲದೆ, ಹುತಾತ್ಮ ಯೋಧರ ಕುಟುಂಬದವರಿಗೆ ಸನ್ಮಾನ ಸಮಾರಂಭಗಳನ್ನು ಆಯೋಜಿಸಿಕೊಳ್ಳುತ್ತಿದ್ದರು. ಹಾಗೂ ಸೇನೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದು ಆತನನ್ನು ಬಂಧಿಸಿದ್ದಾರೆ. ಇನ್ನು ಈತನಿಂದ ಸಮವಸ್ತ್ರ, ನಕಲಿ ಗುರುತಿನಚೀಟಿ, ನಕಲಿ ರಬ್ಬರ್ ಸ್ಟ್ಯಾಂಪ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ತೀವ್ರಗೊಳಿಸಲಾಗಿದೆ.