ಬೆಳ್ತಂಗಡಿ, ನ 25 (DaijiworldNews/SM): ರಾಷ್ಟ್ರಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ನಮ್ಮ ಧರ್ಮ ಕಲಿಸಿಕೊಡುತ್ತದೆ ಎಂದು ಲೋಕಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಹೇಳಿದರು.
img src="https://daijiworld.ap-south-1.linodeobjects.com/iWeb/tvdaijiworld/img_tv247/santhu-25.11.2019-lakshasarvadharma1.jpg">
ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾ ಭವನದಲ್ಲಿ ಸೋಮವಾರ 87ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶವು ನಮ್ಮದೇ ಆದ ಸಂಸ್ಕೃತಿ, ಚಿಂತನೆ, ಪದ್ದತಿಯನ್ನು ಹೊಂದಿದೆ. ಎಲ್ಲರನ್ನು ಗೌರವಿಸುವುದೇ ನಮ್ಮ ಉದ್ದೇಶವಾಗಿದೆ. ದೇಶದಲ್ಲಿ ಹಲವಾರು ಮತ, ಸಂಪ್ರದಾಯಗಳು ಇದ್ದರೂ ಅವೆಲ್ಲದರ ಗುರಿ, ದಾರಿ ಅಂತಿಮವಾಗಿ ದೇವರ ಕಡೆಯೇ ಹೋಗುವುದಾಗಿದೆ ಎಂದರು.
ಎಲ್ಲರಲ್ಲೂ ಒಂದೇ ರಾಷ್ಟ್ರ ಭಾವ ಇರಬೇಕು ಎಂಬುದು ನನ್ನ ಚಿಂತನೆಯಾಗಿದೆ. ವ್ಯಕ್ತಿಯ ವ್ಯಕ್ತಿತ್ವದಲ್ಲಿ ಮುಖ್ಯವಾಗಿ ಚಾರಿತ್ಯ ಇರಲೇಬೇಕು. ನಮ್ಮ ಬದುಕಿನಲ್ಲಿ ರಾಷ್ಟ್ರ ಆದ್ಯತೆಯಾಗಿರಬೇಕು. ರಾಷ್ಟ್ರಕ್ಕಾಗಿ ನಾನು ಎಂಬ ಭಾವ ನಮ್ಮಲ್ಲಿ ಸದಾ ಇರಬೇಕು ಎಂದರು.
ಡಾ. ಹೆಗ್ಗಡೆಯವರು ಸಾಮಾಜಿಕ ಸೇವೆಯ ಮೂಲಕ ಅನೇಕ ಮಂದಿಯಲ್ಲಿ ಆತ್ಮವಿಶ್ವಾಸ ತಂದಿದ್ದಾರೆ. ಜೀವನದಲ್ಲಿ ನಾವು ಏನೆಲ್ಲಾ ಪ್ರಾಪ್ತ ಮಾಡಿಕೊಳ್ಳುತ್ತೇವೆಯೋ ಅದರಿಂದ ಇನ್ನೊಬ್ಬರ ನೋವನ್ನು ಶಮನ ಮಾಡುವಂತಿರಬೇಕು ಎಂದರು.