ಚಿಕ್ಕಬಳ್ಳಾಪುರ ಜ 14 : ಬಾಲಕನೊಬ್ಬನ ಗಂಟಲಲ್ಲಿ ಸೇಬು ಹಣ್ಣಿನ ತುಣುಕು ಸಿಲುಕಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಲ್ಲಿನ ನಕ್ಕಲಕುಂಟೆಯ ಶಾಂತಿನಗರದ ನಿವಾಸಿ ಕಿಜರ್ ಎಂಬವರ ಪುತ್ರ ಆಸಿಫ್ (11 ವರ್ಷ) ಸೇಬು ಹಣ್ಣು ತಿಂದು ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿದೆ. ಮರದಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಜ್ವರದಿಂದ ಬಳಲುತ್ತಿದ್ದ ಆಸಿಫ್, ಚಿಕಿತ್ಸೆ ಪಡೆಯುತ್ತ ಮನೆಯಲ್ಲಿಯೇ ಇದ್ದ. ಆದರೆ ಶನಿವಾರ ಬೆಳಿಗ್ಗೆ ಸೇಬು ಹಣ್ಣು ತಿನ್ನುವ ವೇಳೆ ಏಕಾಏಕಿ ಕುಸಿದು ಬಿದ್ದು ಆಸಿಫ್ ಅಸ್ವಸ್ಥಗೊಂಡಿದ್ದ. ತಕ್ಷಣ ಪೋಷಕರು ಆಸಿಫ್ ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.ಮರಣೋತ್ತರ ಪರೀಕ್ಷೆ ಬಳಿಕ ಮೃತ ಆಸೀಫ್ ನ ಸಾವಿನ ಕಾರಣ ಬಯಲಾಗಿದೆ. ಗಂಟಲಿನಲ್ಲಿ ಸೇಬು ಸಿಲುಕಿಕೊಂಡು ಆಸೀಫ್ ಸಾವು ಎಂದು ಧೃಢಪಡಿಸಿದ್ದಾರೆ. ಅನ್ನನಾಳದ ಬದಲು ಉಸಿರಾಟದ ನಾಳಕ್ಕೆ ಸೇಬು ಸೇರಿದ್ದರಿಂದ ಆಸೀಫ್ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾನೆ.ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.