ಬೆಳ್ಮಣ್, ನ 26 (Daijiworld News/MSP): ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1 ರಲ್ಲಿ ಬೆಳ್ಮಣ್ ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ ಟೋಲ್ ಗೇಟ್ (ಸುಂಕ ವಸೂಲಾತಿ) ಕೇಂದ್ರ ನಿರ್ಮಾಣಕ್ಕೆ ಗುಟ್ಟಾಗಿ ಸರ್ವೆ ಕಾರ್ಯ ಕಳೆದ ಮೂರು ದಿನಗಳಿಂದ ಬೆಳ್ಮಣ್ನಲ್ಲಿ ನಡೆಯುತ್ತಿದ್ದು ಭಾನುವಾರ ರಾತ್ರಿ ವೇಳೆ ಬೆಳಕಿಗೆ ಬಂದಿದ್ದು ಈ ಹಿನ್ನಲೆಯಲ್ಲಿ ಸೋಮವಾರ ಹೋರಾಟ ಸಮಿತಿಯ ವತಿಯಿಂದ ಬೆಳ್ಮಣ್ ನಲ್ಲಿ ಸಭೆ ನಡೆಯಿತು.
ಹೋರಾಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ಮಾತನಾಡಿ ಯಾವುದೇ ಕಾರಣಕ್ಕೂ ಬೆಳ್ಮಣ್ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣಕ್ಕೆ ಆಸ್ಪದವನ್ನು ನೀಡುವುದಿಲ್ಲ. ನಮ್ಮ ಶಾಂತ ರೀತಿಯಾದ ಹೋರಾಟಕ್ಕೆ ಮಣಿಯದಿದ್ದರೆ ಮುಂದೆ ಉಗ್ರ ರೀತಿಯಾದ ಹೋರಾಟವನ್ನು ಮಾಡಲು ನಾವು ಸಿದ್ದರಿದ್ದೇವೆ . ಸರ್ಕಾರ ಹಾಗೂ ಅಧಿಕಾರಿಗಳು ಹೋರಾಟದಲ್ಲಿ ರಕ್ತ ಕಾಣದೆ ಎಚ್ಚರಗೊಳ್ಳುವಂತೆ ಕಾಣುತ್ತಿಲ್ಲ. ಯಾವುದೇ ಕಂಪನಿ ಬಂದು ಬೆಳ್ಮಣ್ ನಲ್ಲಿ ಸುಂಕ ವಸೂಲಿಗಾಗಿ ಸರ್ವೆ ನಡೆಸಿದರೂ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ . ಜನರು ರೊಚ್ಚಿಗೇಳುವ ಮೊದಲು ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳಲಿ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ ಮಾತನಾಡಿ, ಜನಪ್ರತಿನಿಧಿಗಳು ಶಾಸಕರು ಹಾಗೂ ಉಸ್ತುವರಿ ಸಚಿವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ಮಾಡಿ ಯಾವುದೇ ಕಾರಣಕ್ಕೆ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶವನ್ನು ನೀಡದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಟೋಲ್ ವಿರೋಧಕ್ಕಾಗಿ ಜಿಲ್ಲಾಧಿಕಾರಿಗಳನ್ನು ಹಾಗೂ ಶಾಸಕರು ಮತ್ತು ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಮಾಡುವ ಜೊತೆಯಲ್ಲಿ ಕಾನೂನಾತ್ಮಕ ಹೋರಾಟವನ್ನು ನಡೆಸುವ ಬಗ್ಗೆ ನಿರ್ಣಾಯವನ್ನು ಕೈಗೊಂಡರು.
ಆಕ್ರೋಶಿತರಾದ ಗ್ರಾಮಸ್ಥರು : ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣವಾಗುವುದಾದರೆ ನಾವು ರಸ್ತೆಯಲ್ಲೇ ಮಲಗಲು ಸಿದ್ದರಿದ್ದೇವೆ. ಟೋಲ್ ವಿಚಾರವನ್ನು ಕೈಬಿಡದಿದ್ದಲ್ಲಿ ಮುಂದೆ ನಡೆಯುವ ಉಗ್ರ ಹೋರಾಟಕ್ಕೆ ಸರ್ಕಾರವೇ ಹೊಣೆಯಾಗಲಿದೆ. ಯಾವುದೇ ಸಾವು ನೋವು ಸಂಭವಿಸಿದರೂ ಸರ್ಕರವೇ ನೇರ ಹೊಣೆಯಾಗಲಿದೆ ಎಂದು ಹೋರಾಟ ಸಮಿತಿ ಎಚ್ಚರಿಕೆಯನ್ನು ನೀಡಿತು.
ಯಾವುದೇ ಮಾಹಿತಿಯನ್ನು ನೀಡದೆ ಗುಟ್ಟಾಗಿ ಸರ್ವೆಯನ್ನು ನಡೆಸುವುದು ಕಂಡು ಬಂದರೆ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಟೋಲ್ ಬಿಡಿ ಒಂದು ಲೋಡು ಜಲ್ಲಿಯನ್ನು ಬೀಳಲು ಬಿಡುವುದಿಲ್ಲ ಎಂದು ಸೇರಿದ್ದ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಹೋರಾಟ ಸಮಿತಿಯ ಕಾರ್ಯದರ್ಶಿ ಸರ್ವಜ್ಞ ತಂತ್ರಿ, ಶಶಿಧರ್ ಶೆಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ವಾರಿಜಾ ಸಾಲ್ಯಾನ್, ತಾಲೂಕು ಪಂಚಾಯತಿ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಮಾಜಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ರಾವ್, ಶಂಕರ್ ಕುಂದರ್ ಸೂಡ, ಸದಾಶಿವ ಶೆಟ್ಟಿ ಬೋಳ ಮತ್ತಿತರಿದ್ದರು