ಮಂಗಳೂರು ಜ 14 : ಜೀವನದಲ್ಲಿ ಸಾಧಸಿದವರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ.ಇದರಿಂದ ಸಾಧಕರಿಗೆ ಸ್ಪೂರ್ತಿ ಸಿಗುತ್ತದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಾಧೀಶ ನ್ಯಾ| ಜಾನ್ ಮೈಕಲ್ ಡಿ'ಕುನ್ಹಾ ಹೇಳಿದರು. ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ಬಾರಿಯ ಸಂದೇಶ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.ಬಳ್ಳಾರಿ ಧರ್ಮಪ್ರಾಂತದ ಬಿಷಪ್ ರೈ| ರೆ| ಹೆನ್ರಿ ಡಿ'ಸೋಜಾ ಅಧ್ಯಕ್ಷತೆ ವಹಿಸಿಕೊಂಡಿದ್ದರು
ಖ್ಯಾತ ವಿಮರ್ಶಕ, ಸಾಹಿತಿ ಡಾ| ಗಿರಡ್ಡಿ ಗೋವಿಂದರಾಜ ಅವರಿಗೆ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ, ಖ್ಯಾತ ಕೊಂಕಣಿ ಸಾಹಿತಿ ಎಡಿ ನೆಟ್ಟೋ ಅವರಿಗೆ ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ, ಶಿಲ್ಪಿ ಅಶೋಕ್ ಗುಡಿಗಾರ್ ಅವರಿಗೆ ಸಂದೇಶ ಕಲಾ ಪ್ರಶಸ್ತಿ, ಉದಯವಾಣಿ ನಿವೃತ್ತ ಸಂಪಾದಕ ಎನ್. ಗುರುರಾಜ್ ಅವರಿಗೆ ಸಂದೇಶ ಮಾಧ್ಯಮ ಪ್ರಶಸ್ತಿ, ಶಿಕ್ಷಣದ ಜತೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಕೆ. ಗಾದಿಲಿಂಗಪ್ಪ ಅವರಿಗೆ ಸಂದೇಶ ಶಿಕ್ಷಣ ಪ್ರಶಸ್ತಿ, ಖ್ಯಾತ ಕೊಂಕಣಿ ಗಾಯಕ ವಿಲ್ಸನ್ ಒಲಿವೆರಾ ಅವರಿಗೆ ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ ಹಾಗೂ ಭಿಕ್ಷುಕರ, ಮಾನಸಿಕ ರೋಗಿಗಳ, ಅಂಗವಿಕಲರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಟಿ. ರಾಜ ಅವರಿಗೆ ಸಂದೇಶ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಅಭಿನಂದನ ಪತ್ರ, ಪ್ರಶಸ್ತಿ ಫಲಕ ಹಾಗೂ 25,000 ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ.