ಕುಂದಾಪುರ, ನ 26 (DaijiworldNews/SM): ತಾಲೂಕಿನಲ್ಲಿ ಮರಳುಗಾರಿಕೆ ಆರಂಭಗೊಂಡಿದ್ದರೂ ಮರಳನ್ನು ಪೂರೈಸುವಲ್ಲಿ ಸಾಕಷ್ಟು ಗೊಂದಲಗಳಾಗುತ್ತಿವೆ. ಜನಸಾಮಾನ್ಯರಿಗೂ ಒಂದೇ ರೀತಿಯಲ್ಲಿ ಮರಳು ಲಭ್ಯವಾಗುವಂತೆ ತಾ.ಪಂ. ಕಣ್ಗಾವಲು ಇಡಬೇಕಾಗಿದೆ. ಆ ಹಿನ್ನಲೆಯಲ್ಲಿ ತಾ.ಪಂ. ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿ, ಆ ಸಮಿತಿ ಜಿಲ್ಲಾಧಿಕಾರಿಗಳ ಬಳಿ ಮರಳು ಪೂರೈಕೆಯಲ್ಲಿನ ವ್ಯತ್ಯಯ ಮತ್ತು ಗೊಂದಲವನ್ನು ಪರಿಹರಿಸಿಕೊಳ್ಳಬೇಕು. ಇವತ್ತೇ ತಾ.ಪಂ.ಅಧ್ಯಕ್ಷರು ಉಪಾಧ್ಯಕ್ಷರನ್ನು ಒಳಗೊಂಡಂತೆ ಕುಂದಾಪುರ ಕ್ಷೇತ್ರದ 3 ಸದಸ್ಯರು, ಬೈಂದೂರು ಕ್ಷೇತ್ರದ 6 ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿಕೊಂಡು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ಸಮಾಲೋಚಿಸಬೇಕು ಎಂದು ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಕುಂದಾಪುರ ತಾ.ಪಂ.ಸಭಾಂಗಣದಲ್ಲಿ ನಡೆದ 18ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮರಳುಗಾರಿಕೆ ಆರಂಭಗೊಂಡಿದ್ದರೂ ಮರಳು ಪಡೆಯುವಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ನಿಗದಿಸಿದ ದರದಲ್ಲಿ ಮರಳು ಸಿಗುತ್ತಿಲ್ಲ, ಪ್ರಭಾವ ಉಳ್ಳವರಿಗೆ ಬೇಗ ಮರಳು ಸಿಗುತ್ತದೆ ಎಂಬಿತ್ಯಾದಿ ಸದಸ್ಯರ ದೂರುಗಳಿಗೆ ಉತ್ತರಿಸಿದ ಅವರು, ಟೋಕನ್ನಂತೆ ಮರಳು ನೀಡುವುದು ಉತ್ತಮ. ಎಲ್ಲರಿಗೂ ಮರಳು ಸಿಗಬೇಕು. ಆ ಹಿನ್ನಲೆಯಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿ ಗಮನಿಸಿದರೆ ಸಮಸ್ಯೆ ಪರಿಹಾರವಾಗಬಹುದು ಎಂದ ಅವರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಕುಂದಾಪುರ ತಾ.ಪಂ.ನಿಯೋಗ ಬರುವುದಾಗಿ ತಿಳಿಸಿದರು.
ಈಗ ಮರಳು ದರದ ಬಗ್ಗೆ ಸದಸ್ಯರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಹೇಶ್, ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಎರಡುವರೆ ಯೂನಿಟ್ಗೆ 5500, ನಾನ್ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ 6500 ದರ ನಿಗದಿ ಪಡಿಸಲಾಗಿದೆ. ಬಾಡಿಗೆ 25 ಕಿ.ಮೀಗೆ 3000 ಆಗಿರುತ್ತದೆ ಎಂದರು.
ಈಗ ಮರಳು ದರದ ಬಗ್ಗೆ ಸದಸ್ಯರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಹೇಶ್, ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಎರಡುವರೆ ಯೂನಿಟ್ಗೆ 5500, ನಾನ್ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ 6500 ದರ ನಿಗದಿ ಪಡಿಸಲಾಗಿದೆ. ಬಾಡಿಗೆ 25 ಕಿ.ಮೀಗೆ 3000 ಆಗಿರುತ್ತದೆ ಎಂದರು.
ಇನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಗೆ ಮಹಾಲೇಖಪಾಲರ ಕಣ್ತಪ್ಪಿನಿಂದಾಗಿ ಸ್ನಾತಕೋತ್ತರ ಪದವಿ ವಿಶೇಷ ಭತ್ಯೆ 23,000 ಬದಲಾಗಿ ರೂ.44,800 ಎಂದು ನಮೂದಿಸಿರುವುದಾಗಿ ತಿಳಿದು ಬಂದಿದ್ದು, 15-03-2018ರಿಂದ ಇಲ್ಲಿಯವರೆಗೆ ಹೆಚ್ಚುವರಿ ಸ್ನಾತಕೋತ್ತರ ಪದವಿ ಭತ್ಯೆಯನ್ನು ಲೆಕ್ಕ ಹಾಕಿ ಸರಕಾರಕ್ಕೆ ಮರುಪಾವತಿಸುವಂತೆ ಸೂಚಿಸಲಾಗಿದೆ. ವೈದ್ಯರು ಮರುಪಾವತಿಯನ್ನು ಮಾಡಿದ್ದಾರೆ. ಇದು ತಾ.ಪಂನ ಗಮನಕ್ಕೆ ಬಂದಿತ್ತು. ಆದರೆ ಇಲ್ಲಿ ಕರ್ತವ್ಯ ಲೋಪವೆಸಿಗಿದ್ದು ಯಾರು? ಈ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು. ಆ ಬಗ್ಗೆ ತಾ.ಪಂ. ನಿರ್ಣಯ ಮಾಡಬೇಕು ಎಂದು ಸದಸ್ಯ ಕರುಣ್ ಪೂಜಾರಿ, ಪ್ರವೀಣ ಶೆಟ್ಟಿ ಆಗ್ರಹಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಗೊಂದಲದ ಬಗ್ಗೆ ಕರುಣ್ ಪೂಜಾರಿ ಅವರು ಪ್ರಶ್ನಿಸಿ, ಕೆಂಚನೂರಿನ ಶಂಕರ ಪೂಜಾರಿ ಅವರು ಡಯಾಲಿಸಿಸ್ಗೆ ಬಂದಾಗ ಅವರ ಜೊತೆ ಅಂದು ಕರ್ತವ್ಯದಲ್ಲಿದ್ದ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ವರ್ತನೆ ಸರಿಯಲ್ಲ ಎಂದರು. ಅದಕ್ಕೆ ಉತ್ತರಿಸಿದ ವೈದ್ಯಾಧಿಕಾರಿ ಡಾ|ರಾಬರ್ಟ್ ರೆಬೆಲ್ಲೋ, ಆ ದಿನ ಸಿಬ್ಬಂದಿ ಮಾತನಾಡಿದ ರೀತಿ ಮತ್ತು ರೋಗಿ ಕಡೆಯವರು ಅರ್ಥೈಸಿಕೊಂಡ ರೀತಿ ಸರಿಯಾಗಿಲ್ಲ. ಟ್ರಸ್ಟ್ ನೇತೃತ್ವದಲ್ಲಿ ಡಯಾಲಿಸಿಸ್ ವಿಭಾಗ ನಡೆಯುತ್ತಿದೆ. 5 ಯಂತ್ರಗಳು ಇಲ್ಲಿದ್ದು, ಒಂದು ದಿನ 15 ಜನರಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ವಾರದಲ್ಲಿ ಆರು ದಿನ, ವಾರಕ್ಕೆ ಒಬ್ಬ ಪೆಷೆಂಟ್ 2 ಬಾರಿ ಬರಬೇಕಾಗುತ್ತದೆ. ವಾರದಲ್ಲಿ 45 ಜನರಿಗಷ್ಟೇ ಡಯಾಲಿಸಿಸ್ ಮಾಡಲಾಗುತ್ತದೆ ಎಂದರು.