ಕಾಸರಗೋಡು, ನ 26 (DaijiworldNews/SM): ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯನ್ನು ಖಂಡಿಸಿ ಕಾಸರಗೋಡು-ತಲಪಾಡಿ ನಡುವೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಖಾಸಗಿ ಬಸ್ಸು ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.
ಮಂಗಳವಾರ ಕಾಸರಗೋಡು ಸರಕಾರಿ ಅತಿಥಿಗ್ರಹದಲ್ಲಿ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಸುಮ್ಮುಖದಲ್ಲಿ ನಡೆದ ಸಭೆಯಲ್ಲಿ ಲಭಿಸಿದ ಭರವಸೆಯಂತೆ ಮುಷ್ಕರ ಹಿಂದೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಗುತ್ತಿಗೆದಾರ ಶರೀಫ್ ಬೇರ್ಕ, ಬಸ್ಸು ಮಾಲಕರ ಪ್ರತಿನಿಧಿಗಳಾದ ಕೆ. ಗಿರೀಶ್, ಶಂಕರ ನಾಯ್ಕ್, ಎನ್.ಎಂ. ಹುಸೈನಾರ್, ಮುಹಮ್ಮದ್ ಕು೦ಞ, ಪಿ.ಎ. ಸುಬ್ಬಣ್ಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಡಿಸೆಂಬರ್ ಹದಿನೈದರೊಳಗೆ ತಲಪಾಡಿಯಿಂದ ಕಾಸರಗೋಡು ತನಕ ರಸ್ತೆ ಡಾಮರೀಕರಣಗೊಳಿಸುವ ಬಗ್ಗೆ ಲಭಿಸಿದ ಭರವಸೆಯಂತೆ ಮುಷ್ಕರವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಯಿತು.
ಇನ್ನು ರಾಷ್ಟ್ರೀಯ ಹೆದ್ದಾರಿ ೬೬ರ ತಲಪಾಡಿಯಿಂದ ಕಾಸರಗೋಡಿನ ತನಕದ ರಸ್ತೆ ಸಂಪೂರ್ಣವಾಗಿ ಹದಿಗೆಟ್ಟಿದೆ. ಕಳೆದ ಕೆಲವು ವರ್ಷಗಳಿಂದಲೂ ಮಳೆಗಾಲದ ಸಮಯದಲ್ಲಿ ಈ ಭಾಗದಲ್ಲಿ ಸಂಚಾರವೇ ನರಕದಾಯಕವಾಗುತ್ತಿದೆ. ಮಳೆಗಾಲದ ಬಳಿಕ ತೇಪೆ ಕಾರ್ಯ ನಡೆಸಲಾಗುತ್ತದೆ. ಆದರೆ, ಈ ಬಾರಿಯ ಮಳೆಗಾಲದಲ್ಲಿ ವಿಪರೀತ ಹೊಂಡಗಳು ಬಿದ್ದಿದ್ದು, ಸಂಚಾರವೇ ದುಸ್ಥರವೆನಿಸಿದೆ. ಬೃಹದಾಕಾರದ ಹೊಂಡಗುಂಡಿಗಳಿಂದಾಗಿ ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ. ಇದೇ ಕಾರಣಕ್ಕೆ ಸರಕಾರಕ್ಕೆ ಬಿಸಿಮುಟ್ಟಿಸಲು ಖಾಸಗಿ ಬಸ್ ಮಾಲಕರು ಸಂಚಾರವನ್ನೇ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದರು. ಇದೀಗ ಎಚ್ಚೆತ್ತ ಆಡಳಿತ ವರ್ಗ ಹೆದ್ದಾರಿ ದುರಸ್ಥಿಗೆ ಮುಂದಾಗಿದೆ.