ಕಾರ್ಕಳ, ನ 26 (DaijiworldNews/SM): ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ವ್ಯಾಪಾರ ಕೇಂದ್ರಗಳ ತೆರವು ಕಾರ್ಯಚರಣೆಯು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ನೇತೃತ್ವದಲ್ಲಿ ಮಂಗಳವಾರ ನಡೆದಿದೆ. ಬಂಗ್ಲೆಗುಡ್ಡೆಯಿಂದ ತಾಲೂಕು ಕಚೇರಿ ಜಂಕ್ಷನ್ ವರೆಗೆ 6 ಅನಧಿಕೃತ ಬೀದಿ ವ್ಯಾಪಾರ ಕೇಂದ್ರಗಳನ್ನು ತೆರವುಗೊಳಿಸಲಾಗಿದೆ.
ರಸ್ತೆ ಬದಿಯಲ್ಲಿ ಗೂಡಾಂಗಡಿ ಸಹಿತ ಹಾಗೂ ಇತರ ರೀತಿಯಲ್ಲಿ ಹಲವು ಮಂದಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಮನಗಂಡು ಸರಕಾರವು ನಿರ್ದೇಶನ ಹೊರಡಿಸಿದ್ದು, ಅದರಂತೆ ಬೀದಿ ವ್ಯಾಪಾರಿಗಳಿಗೆ ಕಾರ್ಕಳ ಪುರಸಭೆಯು ನವಂಬರ್ 1ರಂದು ಗುರುತು ಚೀಟಿ ನೀಡಿತು. ಬಹುತೇಕ ಬೀದಿ ವ್ಯಾಪಾರಿಗಳು ಅದಕ್ಕೆ ಅರ್ಜಿ ಸಲ್ಲಿಸಿದರೆ, ಕೆಲವರು ಇನ್ನೂ ಅರ್ಜಿ ಸಲ್ಲಿಸಿರಲಿಲ್ಲ. ಒಟ್ಟು ೨೨೧ ಆರ್ಹ ಬೀದಿ ವ್ಯಾಪಾರಿಗಳಿಗೆ ಪುರಸಭೆಯು ಗುರುತಿನ ಚೀಟಿ ನೀಡಿದೆ.
ಉಳಿದ ಕಡೆ ಮುಂದಿನ ದಿನಗಳಲ್ಲಿ ತೆರವು ಕಾರ್ಯಚರಣೆ ನಡೆಯಲಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮಾಹಿತಿ ನೀಡಿದ್ದಾರೆ. ಕಂದಾಯ ಅಧಿಕಾರಿ ಸಂತೋಷ್, ಕಂದಾಯ ನಿರೀಕ್ಷಕ ಶಿವಕುಮಾರ್, ಇಂಜಿನಿಯರ್ ಪದ್ಮನಾಭ, ಕರವಸೂಲಿದಾರರಾದ ರವಿಪುಜಾರಿ, ಚಂದ್ರಶೇಖರ್ ಕಾರ್ಯಚರಣೆಯಲ್ಲಿ ಪಾಲ್ಗೊಂಡವರು.