ಕಾಸರಗೋಡು ಜ 15: ಎರಡು ವಾರಗಳ ಹಿಂದೆ ಪೆರ್ಲ ಕಾಟುಕುಕ್ಕೆಯ ಪೆರಳ್ತಡ್ಕದಲ್ಲಿ ಖಾಸಗಿ ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ಕೊಳೆತ ಪತ್ತೆಯಾದ ಮೃತದೇಹ ಕರ್ನಾಟಕ ಗದಗ ನಿವಾಸಿಯದ್ದೆಂದು ತನಿಖೆಯಿಂದ ತಿಳಿದು ಬಂದಿದ್ದು , ಸಂಬಂಧಿಕರು ಗುರುತು ಪತ್ತೆಹಚ್ಚಿದ್ದಾರೆ.
ಗದಗ ರೋಣದ ಬಸಪ್ಪ ( 26) ಕೊಲೆಗೀಡಾದವರು . ಬಸಪ್ಪ ರವರ ಸಹೋದರ ಭೀಮಪ್ಪ ಮತ್ತು ಸಂಬಂಧಿಕೋರ್ವರು ಬದಿಯಡ್ಕ ಪೊಲೀಸ್ ಠಾಣೆ ಗೆ ತಲುಪಿ ವಸ್ತ್ರದ ಮೂಲಕ ಗುರುತನ್ನು ಪತ್ತೆಹಚ್ಚಿದ್ದಾರೆ . ಆದರೆ ಗುರುತು ಪತ್ತೆಹಚ್ಚಲು ಡಿ ಎನ್ ಎ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಸಪ್ಪ ವಯರಿಂಗ್ , ವೆಲ್ಡಿಂಗ್ ಕೆಲಸ ಮಾಡುತ್ತಿದ್ದನು. ಕಾಟುಕುಕ್ಕೆಯ ವೆಲ್ಡಿಂಗ್ ಅಂಗಡಿಯಲ್ಲಿ ಆಗಾಗ ಕೆಲಸಕ್ಕೆ ತಲುಪುತ್ತಿದ್ದನು . ಇಲ್ಲಿರುವ ಇತರ ಕಾರ್ಮಿಕರು ಮೃತದೇಹದ ವಸ್ತ್ರ ಮೂಲಕ ಬಸಪ್ಪನದ್ದೆಂದು ಗುರುತಿಸಿದ್ದರು .ಮೂರು ತಿಂಗಳ ಹಿಂದೆ ಬಸಪ್ಪ ಊರಿಗೆ ತೆರಳಿ ಬದಿಯಡ್ಕಕ್ಕೆ ಮರಳಿದ್ದನು. ಡಿಸಂಬರ್ 31 ರಂದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು . ಬಳಿಕ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ತಲೆಗೆ ಬಿದ್ದ ಗಂಭೀರ ಸ್ವರೂಪದ ಗಾಯ ಸಾವಿಗೆ ಕಾರಣ ಎಂದು ವರದಿ ತಿಳಿಸಿತ್ತು. ಬಳಿಕ ಕೊಲೆ ಪ್ರಕರಣ ದಾಖಲಿಸಲಾಗಿತ್ತು.