ಉಡುಪಿ, ನ 27 (Daijiworld News/MB) : ಬಾಲಕಿ ಮೇಲೆ 2016ರಲ್ಲಿ ನಗರದ ಹೊರವಲಯದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ 20 ವರ್ಷ ಕಠಿಣ ಶಿಕ್ಷೆ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.
ನವೆಂಬರ್ 20ರಂದು ಜಿಲ್ಲಾ ವಿಶೇಷ ನ್ಯಾಯಾಲಯವು ಆರೋಪಿಗಳಾಗಿದ್ದ ಪದಮ್ ಸಿಂಗ್ ಸೇನ್ ಮತ್ತು ಮುಕೇಶ್ ಸೇನ್ನನ್ನು ಅಪರಾಧಿಗಳೆಂದು ಸಾಬೀತು ಪಡಿಸಿತ್ತು.
ಈ ಅಪರಾಧಿಗಳಿಗೆ ಸಾಮೂಹಿಕ ಅತ್ಯಾಚಾರ ನಡೆಸಿದಕ್ಕಾಗಿ 20 ವರ್ಷ ಕಠಿಣ ಜೈಲು ಶಿಕ್ಷೆ, 20 ಸಾವಿರ ರೂಪಾಯಿ ದಂಡ, ದಂಡ ಕಟ್ಟಲಾಗದಿದ್ದಲ್ಲಿ 1 ವರ್ಷ ಸಾದಾ ಜೈಲು, ಅಪಹರಣಕ್ಕೆ 10 ವರ್ಷ ಜೈಲು ಶಿಕ್ಷೆ, 15 ಸಾವಿರ ರೂಪಾಯಿ ದಂಡ, ದಂಡ ಕಟ್ಟಲಾಗದಿದ್ದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ, ಜೀವ ಬೆದರಿಕೆ ನೀಡಿದ ಹಿನ್ನಲೆಯಲ್ಲಿ 1 ವರ್ಷ ಜೈಲು ಶಿಕ್ಷೆ, 5 ಸಾವಿರ ರೂಪಾಯಿ ದಂಡ, ತಪ್ಪಿದಲ್ಲಿ 3 ತಿಂಗಳು ಜೈಲು ಶಿಕ್ಷೆ, ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷ ಜೈಲು ಶಿಕ್ಷೆ, 20 ಸಾವಿರ ರೂಪಾಯಿ ದಂಡ, ತಪ್ಪಿದಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
2016ರ ಜುಲೈ ೮ರಂದು ಪದಮ್ ಸಿಂಗ್ ಹಾಗೂ ಮುಕೇಶ್ ಸಿಂಗ್ ರಾತ್ರಿಯ ವೇಳೆ ಬಾಲಕಿಯ ತಂದೆ ಕೆಲಸಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯನ್ನು ಬಲವಂತವಾಗಿ ಬಡಗಬೆಟ್ಟಿನಲ್ಲಿರುವ ಬಾಡಿಗೆ ಮನೆಯೊಂದಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದು ಜೀವ ಬೆದರಿಕೆ ಹಾಕಿ ಮನೆಯ ಬಳಿ ಬಿಟ್ಟು ಬಂದಿದ್ದರು.2016 ಜುಲೈ 10ರಂದು ಈ ಕುರಿತು ಪ್ರಕರಣ ದಾಖಲಾಗಿದೆ.
ಅಂದಿನ ತನಿಖಾಧಿಕಾರಿಗಳಾದ ಉಡುಪಿವೃತ್ತ ನಿರೀಕ್ಷಕ ಶ್ರೀಕಾಂತ್ ಕೆ ಮತ್ತು ಜೈಶಂಕರ್ ಈ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ 2016 ರ ಸೆಪ್ಟೆಂಬರ್ 20ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 34 ಸಾಕ್ಷಿಗಳ ಪೈಕಿ 21 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆಯನ್ನು ಪಡೆದುಕೊಳ್ಳಲಾಗಿತ್ತು.
ಸಂತ್ರಸ್ತೆಗೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ 1 ಲಕ್ಷ ರೂಪಾಯಿ ಪರಿಹಾರ ಪಡೆದುಕೊಳ್ಳುವಂತೆ ನ್ಯಾಯಾಧೀಶರು ಆದೇಶಿದ್ದಾರೆ.
ಬಾಲಕಿಯ ಪರ ಜಿಲ್ಲಾ ಪೋಕ್ಸೋ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದ ಮಂಡನೆ ಮಾಡಿದ್ದರು. ಕಳೆದ ವರ್ಷ ಇದೇ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕರ ಮೇಲೆ ಆರೋಪಿ ತನ್ನ ಶೂ ಎಸೆದಿದ್ದ ಹಿನ್ನಲೆಯಲ್ಲಿ ಮಂಗಳವಾರ ನ್ಯಾಯಾಲಯದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.