ಬಂಟ್ವಾಳ, ನ 27 (Daijiworld News/MB) : ಅರಣ್ಯ ರಕ್ಷಕ ಆಗಿರುವ ಮನೋಜ್ ಅವರ ಮೇಲೆ ಹೊರಿಸಲಾಗಿದ್ದ ಲಂಚ ಸ್ವೀಕಾರ ಆರೋಪವು ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸಾಬೀಯಾಗಿದ್ದು ಆರೋಪಿಗೆ 2 ವರ್ಷಗಳ ಕಾಲ ಸಾದಾ ಜೈಲು ಶಿಕ್ಷೆ ನೀಡಲಾಗಿದೆ.
ಅಪರಾಧಿಯು ಪ್ರಸ್ತುತ ಬಂಟ್ವಾಳ ತಾಲೂಕು ವಗ್ಗ ದಲ್ಲಿ ಅರಣ್ಯ ರಕ್ಷಕ ಆಗಿದ್ದು ಘಟನೆ ನಡೆದ ಸಂದರ್ಭದಲ್ಲಿ ವೀರಕಂಬದಲ್ಲಿ ಅರಣ್ಯ ರಕ್ಷಕ ಆಗಿದ್ದರು.
2012 ರ ಜುಲೈ 23ರಂದು ಮರದ ಕಟ್ಟಿಗೆ ಸಾಗಿಸುತ್ತಿದ್ದ ಟೆಂಪೋ ವನ್ನು ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಲು ವಾಹನದ ಮಾಲೀಕ ಬಂಟ್ವಾಳ ತಾಲೂಕು ಬಾರೆಬೆಟ್ಟು ನಿವಾಸಿ ಮೊಹಮ್ಮದ್ ಮುಸ್ತಾಫ ಎಂಬವರಿಂದ ರೂ 5,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿರುವ ವೇಳೆ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ದಿಲೀಪ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿ ಮನೋಜ್ ಅವರನ್ನು ಬಂಧಿಸಿತ್ತು.
ಅಪರಾಧಿಗೆ ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 7 ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ ಆರೋಪಿಗೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆಯನ್ನು ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳಿಧರ ಪೈ ವಿಧಿಸಿದ್ದಾರೆ.
ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.