ಕಟಪಾಡಿ ಜ 15: ಇಲ್ಲಿನ ದೈವಸ್ಥಾನದಿಂದ ಜ 3 ರಂದು ಕಳವಾಗಿದ್ದ ದೈವದ ವಿಗ್ರಹ, ಬೆಳ್ಳಿಯ ಪೀಠ ಮತ್ತು ಪ್ರಭಾವಳಿಯ ಬೆಳ್ಳಿಯ ಸೊತ್ತನ್ನು ಕಳ್ಳರು ಮತ್ತೆ ಜ 13 ರ ಶನಿವಾರ ರಾತ್ರಿ ವಾಪಸು ದೈವ ಸ್ಥಾನದ ಅಂಗಳಕ್ಕೆ ಎಸೆದು ಹೋಗಿರುವ ಘಟನೆ ನಡೆದಿದೆ.ಆದರೆ ಕಳವಾದ ಈ ಸೊತ್ತುಗಳು ಯಥಾಸ್ಥಿತಿಯಲ್ಲಿ ಇರದೆ ಬೆಳ್ಳಿಯ ತಗಡಿನಂತೆ ಚೂರು ಚೂರು ಮಾಡಿ ಬೇರ್ಪಡಿಸಿದ್ದಾರೆ. ಇವುಗಳಲ್ಲಿ ಕಳವಾಗಿದ್ದ ಅರ್ಧದಷ್ಟು ಸೊತ್ತು ವಾಪಾಸು ಬಂದಿದೆ. ಕಳ್ಳತನದ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಇವರೆಗೆ ಕಳ್ಳರ ಸುಳಿವು ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ಸಂಕ್ರಾತಿಯ ನಿಮಿತ್ತ ದೈವಸ್ಥಾನದ ಮುಕ್ಕಾಲ್ದಿ ರಮೇಶ್ ಕೋಟ್ಯಾನ್ ಮುಂಜಾನೆ ಬಂದು ನೋಡಿದಾಗ, ಪ್ಲಾಸ್ಟಿಕ್ ಚೀಲದಲ್ಲಿ ಕಾಗದದಲ್ಲಿ ಸುತ್ತಿದ ಬೆಳ್ಳಿಯ ತಗಡುಗಳು ಪತ್ತೆಯಾಗಿದೆ. ಇದನ್ನು ಕಿಟಕಿ ಮೂಲಕ ಒಳಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ದೈವದ ಭಯ, ಎದುರಾದ ಕಷ್ಟಕ್ಕೆ ಹೆದರಿ ಅಥವಾ ಕದ್ದ ಸೊತ್ತು ಮಾರಾಟ ಮಾಡಲು ತೊಂದರೆಯಾಗಿ ಕದ್ದ ಸೊತ್ತುಗಳನ್ನು ವಾಪಸು ಎಸೆದು ಹೋಗಿರಬಹುದೆಂದು ಅಭಿಪ್ರಾಯ ಕೇಳಿ ಬಂದಿದೆ. ಇನ್ನು ಪತ್ತೆಯಾದ ಸೊತ್ತನ್ನು ಕಾಪು ಪೊಲೀಸರು ವಶಪಡಿಸಿಕೊಂಡಿದ್ದಾರೆ.