ಬೆಳ್ತಂಗಡಿ, ನ 27 (DaijiworldNews/SM): ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಮಂಗಳವಾರ ರಾತ್ರಿ ಸಹಸ್ರಾರು ಭಕ್ತ ಸಮೂಹದ ಸಮ್ಮುಖದಲ್ಲಿ ಗೌರಿ ಮಾರುಕಟ್ಟೆ ಉತ್ಸವ ನಡೆದು, ಬುಧವಾರ ಶ್ರೀಚಂದ್ರನಾಥ ಸ್ವಾಮಿ ಸಮವಸರಣ ಪೂಜೆಯೊಂದಿಗೆ ಧರ್ಮಸ್ಥಳದ ಲಕ್ಷದೀಪೋತ್ಸವ ಸಂಪನ್ನಗೊಂಡಿತು.
ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಶ್ರೀ ಮಂಜುನಾಥ ಸ್ವಾಮಿಯ ಗೌರಿಮಾರುಕಟ್ಟೆ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ದೇವಸ್ಥಾನದಲ್ಲಿ ದೇವರ ಬಲಿ ಸುತ್ತುಗಳು ನಡೆದು, ಬಳಿಕ ದೀಪಗಳಿಂದ ಹಾಗೂ ಹೂವುಗಳಿಂದ ಅಲಂಕಾರಗೊಂಡಿದ್ದ ಬೆಳ್ಳಿ ರಥ, ಸ್ವರ್ಣ ಪಲ್ಲಕ್ಕಿಯಲ್ಲಿ ಶ್ರೀಮಂಜುನಾಥ ಸ್ವಾಮಿಯ ಮೆರವಣಿಗೆ ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತ ಸಮೂಹದೊಂದಿಗೆ ದೇವಸ್ಥಾನದ ಬಳಿಯಿಂದ ಕ್ಷೇತ್ರದ ಮುಖ್ಯ ದ್ವಾರದ ಬಳಿಯ ಗೌರಿಮಾರುಕಟ್ಟೆ ಬಳಿ ಸಾಗಿತು.
ಮೆರವಣಿಗೆಯಲ್ಲಿ ಶೃಂಗಾರಗೊಂಡ ಆನೆಗಳು, ನಿಶಾನೆಗಳು, ಬಿರುದಾವಳಿಗಳು, ಶಂಖ, ಜಾಗಟೆ, ಕೊಂಬು, ವೀರಗಾಸೆ, ಕರಡಿಮೇಳ, ಕಹಳೆ, ಚೆಂಡೆ, ಡೊಳ್ಳು, ವಾಲಗಗಳು, ಬ್ಯಾಂಡ್-ವಾದ್ಯಗಳ ಸೇವೆಯೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು.
ಈ ಸಂದರ್ಭ ಮಾಣಿಲ ಶ್ರೀಧಾಮದ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ, ಡಿ.ಸುರೇಂದ್ರಕುಮಾರ್, ಶ್ರೇಯಸ್, ಡಾ.ಬಿ.ಯಶೋವರ್ಮ, ಹೆಗ್ಗಡೆಕುಟುಂಬಸ್ಥರು ಭಾಗವಹಿಸಿದ್ದರು.