ಉಡುಪಿ, ನ 27 (DaijiworldNews/SM): ಹಿರಿಯಡ್ಕ ಸುವರ್ಣ ನದಿಯ ಬಜೆ ಡ್ಯಾಂನಿಂದ ಶೀರೂರು ಡ್ಯಾಮ್ವರೆಗೆ ಸುಮಾರು 7 ಕಿ.ಮೀ. ಉದ್ದ ಕುಡಿಯುವ ನೀರಿನ ಉದ್ದೇಶಕ್ಕೆ ಹೂಳು ತೆಗೆಯಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಡುಪಿ ನಗರಸಭೆಯಿಂದ ಟೆಂಡರ್ ಆಹ್ವಾನಿಸಲಾಗಿದ್ದು, ಯೋಜಕಾ ಇಂಡಿಯಾ ಕಂಪೆನಿ, ಮಂಗಳೂರು ಇವರು ಟೆಂಡರ್ ವಹಿಸಿಕೊಂಡಿದ್ದಾರೆ.
ಇಲ್ಲಿ ತೆಗೆಯುವ ಹೂಳಿನಿಂದ ಮರಳು ಬೇರ್ಪಡಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀಡುವ ಉದ್ದೇಶ ಜಿಲ್ಲಾಡಳಿತ ಹೊಂದಿದೆ. ಆದ್ದರಿಂದ ಹೊಳೆಯ ಅಕ್ಕಪಕ್ಕ ಗುತ್ತಿಗೆದಾರರಿಗೆ ಮತ್ತು ವಾಹನ/ ಯಂತ್ರಗಳಿಗೆ ಚಲಿಸಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಜಗದೀಶ್ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ವಿರುದ್ಧವಾಗಿ ಯಾರಾದರೂ ಗುತ್ತಿಗೆದಾರರಿಗೆ ಮತ್ತು ಅವರ ಡ್ರಜಿಂಗ್ ಯಂತ್ರಗಳಿಗೆ ತೊಂದರೆ ಉಂಟು ಮಾಡಿದ್ದಲ್ಲಿ ಅಥವಾ ಹಾನಿ ಮಾಡಿದ್ದಲ್ಲಿ ಹಾಗೂ ಟಿಪ್ಪರ್ ಲಾರಿಗಳಿಗೆ ನದಿಯ ದಂಡೆಯ ಜಾಗದಲ್ಲಿ ಚಲಿಸಲು ತೊಂದರೆ ನೀಡಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.