ಉಡುಪಿ ನ 28(Daijiworld News/SB): ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ ಶಿರ್ವ ಡೋನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಫಾ. ಮಹೇಶ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯು ಪ್ರಗತಿಯಲ್ಲಿದ್ದು ಘಟನೆಗೆ ಸಂಬಂಧಿಸಿ ಈಗಾಗಲೇ 50 ಮಿಕ್ಕಿ ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಘಟನೆಯ ತನಿಖೆ ನಡೆಸುತ್ತಿರುವ ಕಾಪು ಸರ್ಕಲ್ ಇನ್ಸೆಪೆಕ್ಟರ್ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿಯೊಂದಿಗೆ ಮಾತಾನಾಡಿದ ಅವರು “ ಫಾ. ಆತ್ಮಹತ್ಯೆಯ ನಿಗೂಢತೆಯನ್ನು ಬಯಲಿಗೆಳೆಯುವಂತೆ ಚರ್ಚ್ ಪರಿಸರದಲ್ಲಿ ಪ್ರತಿಭಟನೆಗಳು ನಡೆದಿದ್ದುವು. ಈ ಸಂಧರ್ಭದಲ್ಲಿ ಚರ್ಚಿನ ಆಡಳಿತಕ್ಕೆ ಹಾಗೂ ಪ್ರತಿಭಟನಕಾರರಿಗೆ ತನಿಖೆಯನ್ನು ಶೀಘ್ರವಾಗಿ ನಡೆಸುವ ಬಗ್ಗೆ ಭರವಸೆಯನ್ನು ನೀಡಿದ್ದೆವು. ಈ ನಿಟ್ಟಿನಲ್ಲಿ ಈಗಾಗಲೇ ನಾವು ಫಾ. ಮಹೇಶ್ ಅವರ ಕೆಲ ಕುಟುಂಬಸ್ಥರು ಹಾಗೂ ಆಪ್ತರನ್ನೊಳಗೊಂಡಂತೆ ಸುಮಾರು 50ಕ್ಕೂ ಹೆಚ್ಚಿನ ಜನರನ್ನು ವಿಚಾರಣೆಗೊಳಪಡಿಸಿ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಫಾ. ಮಹೇಶ್ ಅವರ ಮೊಬೈಲ್ ಫೋನನ್ನು ಫೋರೆನ್ಸಿಕ್ ಟೆಸ್ಟಿಗಾಗಿ ಕಳುಹಿಸಿಕೊಡಲಾಗಿದೆ. ಇನ್ನು ಒಂದು ವಾರದಲ್ಲಿ ಫೋರೆನ್ಸಿಕ್ ಸೈನ್ಸ್ ಲ್ಯಾಬರೋಟರಿ(FSL)ಯಿಂದ ವರದಿ ದೊರಕಲಿದೆ" ಎಂದು ತಿಳಿಸಿದ್ದಾರೆ.
ಈ ಮೊದಲು ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಸುನಿಲ್ ಕಬ್ರಾಲ್ , ಕೋರ್ನಾಲ್ಡ್ ಕಾಸ್ತೆಲಿನೊ ಹಾಗೂ ಇನ್ನಿತರ ಕೆಲವರು ರಾಜ್ಯ ಗೃಹಸಚಿವರನ್ನು ಹಾಗೂ ಆಡಳಿತ ಪಕ್ಷದ ಇತರ ನಾಯಕರನ್ನು ಭೇಟಿ ಮಾಡಿ ತನಿಖೆಗೆ ಚುರುಗು ಮುಟ್ಟಿಸಲು ಆಗ್ರಹಿಸಿದ್ದರು. ರಾಜಕೀಯ ಮುಖಂಡರ ಭೇಟಿಯ ನಂತರ ತನಿಖೆಯು ಚುರುಕುಗೊಂಡಿತು ಎಂಬ ವದಂತಿಯೂ ಹರಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ತನಿಖಾಧಿಕಾರಿ “ತನಿಖೆಯಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ. ಕೆಲ ವ್ಯಕ್ತಿಗಳು ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರು. ತನಿಖಾ ತಂಡವು ಪಕ್ಷಾತೀತವಾಗಿ ತನ್ನ ಕೆಲಸವನ್ನು ಮಾಡುತ್ತಿದೆ. ಕೆಲವೇ ದಿನಗಳಲ್ಲಿ ಘಟನೆಯ ಹಿಂದಿನ ಸ್ಪಷ್ಟ ಚಿತ್ರಣ ಹೊರಬೀಳಲಿದೆ " ಎಂದು ಹೇಳಿದ್ದಾರೆ.
ಮಹೇಶ್ ಅವರ ಮೊಬೈಲ್ ಫೋನಿನಲ್ಲಿದ್ದ ಕೆಲ ದಾಖಲೆಗಳು ಆಳಿಸಿಹೋಗಿದ್ದುವು ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ಈ ಬಗ್ಗೆ ಮಾತನಾಡಿದ ಮಹೇಶ್ ಪ್ರಸಾದ್ ” ಫಾ. ಮಹೇಶ್ ಐಫೋನ್ ಕಂಪೆನಿಗೆ ಸೇರಿದ ಮೊಬೈಲ್ ಫೋನ್ ಬಳಸುತ್ತಿದ್ದರು. ಶ್ರೇಷ್ಟ ಭದ್ರತಾ ತಂತ್ರಜ್ಞಾನ ಒಳಗೊಂಡ ಈ ಫೋನಿನಲ್ಲಿದ್ದ ದಾಖಲೆಗಳನ್ನು ಅಳಿಸುವುದು ಸುಲಭ ಸಾಧ್ಯವಲ್ಲ. ಒಂದು ವೇಳೆ ದಾಖಲೆಗಳು ಅಳಿಸಿದ್ದರೆ ಫೋರೆನ್ಸಿಕ್ ವರದಿಯಲ್ಲಿ ಇದು ತಿಳಿದುಬರಲಿದೆ. ಆದುದರಿಂದ ಈ ವರದಿಗಾಗಿ ಕಾಯುತ್ತಿದ್ದೇವೆ ” ಎಂದಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿಗೆ ದೊರಕಿದ ಮಾಹಿತಿ ಪ್ರಕಾರ ಕೆಲ ಧರ್ಮಗುರುಗಳನ್ನೊಳಗೊಂಡು ಫಾ. ಮಹೇಶ್ ಆವರ ಕೆಲ ಆಪ್ತರನ್ನು ಪೋಲಿಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖಾ ವರದಿಯಲ್ಲಿ ಫಾ. ಮಹೇಶ್ ಅವರು ಆತ್ಮಹತ್ಯೆಗೈದಿದ್ದರು ಎಂದು ನಮೂದಿಸಲಾಗಿತ್ತು. ನಂತರ 50 ದಿನಗಳು ಕಳೆದರೂ ಫೋರೆನ್ಸಿಕ್ ವರದಿ ಬಾರದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿತ್ತು. ಸಂಕೀರ್ಣ ಪ್ರಕರಣಗಳ ವರದಿಗಳನ್ನು ತರಾತುರಿಯಲ್ಲಿ ತಯಾರಿಸುವುದು ಸಮಂಜಸವಲ್ಲ ಎಂದು ಪೊಲೀಸ್ ಇಲಾಖೆ ಸಮಜಾಯಿಷಿ ನೀಡಿದ್ದರು.