ಬೈಂದೂರು, ನ 28(Daijiworld News/MB): "ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತ್ಯ, ಧರ್ಮ, ನ್ಯಾಯಕ್ಕಾಗಿ ಹೋರಾಟ ಮಾಡಿದ ಕರಾವಳಿಯ ಅವಳಿ ವೀರಪುರಷರಾದ ಕೋಟಿ ಚೆನ್ನಯ್ಯರ 66 ಮೂಲ ಗರೋಡಿಗಳಿದೆ, ಅವುಗಳು ತಮ್ಮ ಪೂಜಾ ವಿಧಿವಿಧಾನದ ಮೂಲಕ ಇಂದಿಗೂ ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿರುವುದಲ್ಲದೇ ಶ್ರೇಷ್ಠ ಆರಾಧನ ಕೇಂದ್ರಗಳಾಗಿ ಮಾರ್ಪಟ್ಟಿದೆ. ಕೋಟಿ ಚೆನ್ನಯ್ಯ ಗರೋಡಿಗಳು ನಮ್ಮ ತುಳು ಸಂಸ್ಕೃತಿಯ ಪ್ರತೀಕವಾಗಿದೆ" ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಇಲ್ಲಿನ ಯಡ್ತರೆ ನಾಕಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕೋಟಿ ಚೆನ್ನಯ್ಯ ಗರಡಿಗೆ ಭೇಟಿ, ಅದರ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
"ಇಲ್ಲಿನ ನಿರ್ಮಾಣ ಹಂತದಲ್ಲಿರುವ ಗರಡಿಯು ಕಾಷ್ಠಶಿಲ್ಪದಿಂದ ಕಂಗೊಳಿಸುತ್ತಿದ್ದು, ಕೋಟಿ ಚೆನ್ನಯ್ಯ ಮೂಲ ಪರಿಕಲ್ಪನೆಗೆ ಚ್ಯುತಿ ಬಾರದಂತೆ, ಶಾಸ್ತ್ರೋಕ್ರವಾಗಿ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ. ಇದು ಕೋಟಿ ಚೆನ್ನಯ್ಯರ ಕೊನೆಯ ಗರೋಡಿಯಾಗಿದ್ದರೂ, ಎಲ್ಲಾ ಗರೋಡಿಗಳನ್ನು ಮೀರಿಸುವ ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭ ಖಂಬದಕೋಣೆ ರೈತರ ಸೇವಾ ಸಹಕಾರಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ, ಯಡ್ತರೆ ಗ್ರಾಪಂ ಉಪಾಧ್ಯಕ್ಷ ನಾಗರಾಜ ಗಾಣಿಗ, ಸದಸ್ಯ ಉಮೇಶ್, ಆನಂದ ಶೆಟ್ಟಿ, ಸ್ಥಳೀಯರಾದ ಎಸ್. ಮದನಕುಮಾರ್ ಉಪ್ಪುಂದ, ಜಗನ್ನಾಥ ಶೆಟ್ಟಿ, ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವೆಂಕಟ ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ ಮೇಲ್ಹಿತ್ಲು ಮೊದಲಾದವರು ಉಪಸ್ಥಿತರಿದ್ದರು.