ಉಳ್ಳಾಲ, ನ 28 (DaijiworldNews/SM): ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಆಡಳಿತದ ವಿಚಾರವಾಗಿ ಎಸ್ ಕೆ ಎಸ್ ಎಸ್ ಎಫ್ ಹಾಗೂ ಎಸ್ ಡಿಪಿಐ ನಡುವೆ ನಡೆಯುತ್ತಿದ್ದ ಹೋರಾಟಕ್ಕೆ ಇದೀಗ ತೆರೆ ಬಿದ್ದಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಕರಾವಳಿಯ ಮಸೀದಿಯೊಂದ ವಕ್ಫ್ ಮಂಡಳಿತ ಆಡಳಿತಕ್ಕೆ ಒಳಪಟ್ಟಿದೆ.
ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ನೂತನವಾಗಿ ನೇಮಕಗೊಂಡಿರುವ ಆಡಳಿತ ಅಧಿಕಾರಿಗೆ ಹಸ್ತಾಂತರಿಸುವಂತೆ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಸೂಚಿಸಿದ್ದಾರೆ.
ಇನ್ನು ಕಳೆದ ಕೆಲ ದಿನಗಳ ಹಿಂದೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾಕ್ಕೆ ಸರಕಾರದಿಂದ ನೇಮಕಗೊಂಡು ಅಧಿಕಾರ ಸ್ವೀಕರಿಸಲು ಆಗಮಿಸಿದ್ದ ಅಧಿಕಾರಿಯನ್ನು ಸ್ಥಳೀಯರು ಹಿಂದಕ್ಕೆ ಕಳುಹಿಸಿದ್ದ ಘಟನೆ ನಡೆದಿತ್ತು.
ದರ್ಗಾದ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಇಬ್ರಾಹಿಂ ಗೂನಡ್ಕ ಅವರು, ನವಂಬರ್ 22ರಂದು ದರ್ಗಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಅಧ್ಯಕ್ಷರು ಊರಲ್ಲಿಲ್ಲದ ಕಾರಣ ಅವರು ಬಂದ ಬಳಿಕ ಬರುವಂತೆ ಸೂಚಿಸಿದ ಸಮಿತಿಯವರು ಮತ್ತು ಸ್ಥಳೀಯರು ಅವರನ್ನು ಹಿಂದಕ್ಕೆ ಕಳುಹಿಸಿದ್ದರು.
ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ನೂತನ ಸಮಿತಿ ಅಸ್ತಿತ್ವಕ್ಕೆ ಬಂದು ಮೂರುವರೆ ವರ್ಷಗಳಾಗಿದೆ. ಈ ನಡುವೆ ನಾಲ್ಕನೇ ಬಾರಿಗೆ ಆಡಳಿತಾಧಿಕಾರಿ ನೇಮಕಗೊಳಿಸಲಾಗಿದೆ. ಈ ತನಕ ಮೂರು ಆಡಳಿತಾಧಿಕಾರಿ ನೇಮಕ ಕಾಂಗ್ರೆಸ್ ಸರಕಾರದ ಅವಧಿಯಲ್ಲಾಗಿದ್ದರೆ, ಈ ಬಾರಿ ಬಿಜೆಪಿ ಅಧಿಕಾರದ ಅವಧಿಯಲ್ಲಾಗಿದ್ದು, ಇಬ್ರಾಹಿಂ ಗೂನಡ್ಕ ಎಂಬವರು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದರು.
ಸುಮಾರು 3 ವರ್ಷದ ಹಿಂದೆ ಅಬ್ದುಲ್ ರಶೀದ್ ಅವರು ದರ್ಗಾದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ವಿರೋಧಿಗಳು ಸರಕಾರದ ಮೇಲೆ ಒತ್ತಡ ಹೇರಿ ಆಡಳಿತಾಧಿಕಾರಿ ನೇಮಕವಾಗುವಂತೆ ಮಾಡಿದ್ದರು. ಅದರಿಂದಾಗಿ ದರ್ಗಾದ ಕಚೇರಿಗೆ ಬೀಗ ಜಡಿಯಲ್ಪಟ್ಟ ಪ್ರಸಂಗವೂ ನಡೆದಿದು, ಉಳ್ಳಾಲದಲ್ಲಿ ಆಡಳಿತಗಾರರ ಪರ ಮತ್ತು ವಿರುದ್ಧ ಕಲಹ ನಡೆದು ಅಶಾಂತಿಯ ವಾತಾವರಣ ಸೃಷ್ಟಿಯಾಗಿತ್ತು.ಬಳಿಕ ಅಧ್ಯಕ್ಷರು ಹಾಗೂ ಸ್ಥಳೀಯರು ಸರಕಾರಕ್ಕೆ ವಾಸ್ತವ ತಿಳಿಸಿದ್ದರಿಂದ ಆಡಳಿತಾಧಿಕಾರಿಯನ್ನು ಹಿಂದಕ್ಕೆ ಪಡೆಯಲಾಗಿತ್ತು.
ಆ ಬಳಿಕ ಕೇರಳ ಮೂಲದ ಸಂಘಟನೆಯೊಂದರ ಪ್ರಭಾವ ಬಳಸಿ ಮತ್ತೊಮ್ಮೆ ಆಡಳಿತಾಧಿಕಾರಿಯಾಗಿ ನಿವೃತ್ತ ಪೊಲೀಸ್ ಅಧಿಕಾರಿ ಜಿ. ಬಾವ ಅವರನ್ನು ನೇಮಿಸುವ ಯತ್ನ ನಡೆದಾಗ ಬಾವ ಅವರೇ ನಿರಾಕರಿಸಿದ್ದರು. ಬಳಿಕ ಅಧ್ಯಕ್ಷರೇ ರಾಜಿನಾಮೆ ನೀಡುವಂತೆ ಒತ್ತಡ ಹಾಕಿ, ದರ್ಗಾಕ್ಕೆ ಆಡಳಿತಾಧಿಕಾರಿಯಾಗಿ ಕೆಎಎಸ್ ಅಧಿಕಾರಿಯೊಬ್ಬರನ್ನು ಗೊತ್ತುಪಡಿಸಲಾಗಿತ್ತು.
ಇದಾದ ಕೆಲವೇ ದಿನಗಳಲ್ಲಿ ಸರಕಾರ ಬಿದ್ದು ಹೋಗಿದ್ದರಿಂದ ದರ್ಗಾ ಆಡಳಿತ ಮುಂದುವರಿದಿತ್ತು. ಇದೀಗ ಬಿಜೆಪಿ ಅಧಿಕಾರದಲ್ಲಿದ್ದು, 4ನೇ ಬಾರಿಗೆ ಆಡಳಿತಾಧಿಕಾರಿ ನೇಮಕವಾಗಿದೆ.
ಇದೀಗ ಆಡಳಿತ ಹಸ್ತಾಂತರ ವಿಷಯವಾಗಿ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶಾಂತಿ ಸಭೆ ನಡೆದಿದ್ದು, ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಆಡಳಿತವನ್ನು ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ನೂತನವಾಗಿ ನೇಮಕಗೊಂಡಿರುವ ಆಡಳಿತ ಅಧಿಕಾರಿಗೆ ಹಸ್ತಾಂತರಿಸುವಂತೆ ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಸೂಚನೆ ನೀಡಿದ್ದಾರೆ.