ಕೊಣಾಜೆ, ನ 28 (DaijiworldNews/SM): ಕೊಣಾಜೆ ಗ್ರಾಮದ ಅಡ್ಕರೆಪಡ್ಪುವಿನಲ್ಲಿ ನಡೆಯುತ್ತಿದ್ದ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಗಾಂಜಾ ವ್ಯಸನಿಗಳ ಕರಿಛಾಯೆ ಬಿದ್ದ ಪರಿಣಾಮ ಕಾರ್ಯಕ್ರಮದಲ್ಲಿ ಹೊಡೆದಾಟ ನಡೆದಿದ್ದು, ಐವರು ಆರೋಪಿಗಳನ್ನು ಕೊಣಾಜೆ ಪೊಲೀಸರು ರೆಡ್ಹ್ಯಾಂಡಾಗಿ ಬಂಧಿಸಿದ್ದಾರೆ. ಉಳ್ಳಾಲದ ಮುಕಚ್ಚೇರಿ ಹಿಲರಿಯಾ ನಗರದ ನಿವಾಸಿಗಳಾದ ಸಿನಾನ್, ಸಲ್ಮಾನ್ ಮೊಹಮ್ಮದ್, ಸಮೀರ್, ಮಹಮ್ಮದ್ ಅಲಿ, ಮೊಹಮ್ಮದ್ ಸಿರಾಜ್ ಬಂಧಿತ ಆರೋಪಿಗಳು.
ಕೊಣಾಜೆ ಗ್ರಾಮದ ಅಡ್ಕರೆಪಡ್ಪು ಎಂಬಲ್ಲಿರುವ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈದ್-ಮಿಲಾದ್ ಪ್ರಯುಕ್ತ ಕಳೆದ ಮೂರು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಈ ನಡುವೆ ಮಂಗಳವಾರ ರಾತ್ರಿ ಕಾರ್ಯಕ್ರಮ ಪ್ರಯುಕ್ತ ಅಳವಡಿಸಲಾಗಿದ್ದ ಟ್ಯೂಬ್ಲೈಟ್ಗಳನ್ನು ಯಾರೋ ಒಡೆದಿದ್ದರು. ಈ ಪ್ರಕರಣ ಪತ್ತೆಹಚ್ಚುವ ಸಲುವಾಗಿ ಬುಧವಾರ ಸ್ಥಳೀಯರು ಕಾದು ಕುಳಿತಿದ್ದರು.
ಇದೇ ವೇಳೆ ಹೊರ ಊರಿನಿಂದ ಬಂದಿದ್ದ ನಾಲ್ವರು ಗಾಂಜಾ ವ್ಯಸನಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ತಮ್ಮ ತಪ್ಪನ್ನು ಅಲ್ಲಗಳೆದಿದ್ದರು. ಈ ಸಂದರ್ಭ ಕೊಣಾಜೆ ಪಂಚಾಯಿತಿಯ ಮಾಜಿ ಅಧ್ಯಕ್ಷ ಶೌಕತ್ ಅಲಿ ಹಾಗೂ ಸದಸ್ಯ ಅಬ್ದುಲ್ ಖಾದರ್ ಅವರೂ ಕೇಸು ದಾಖಲಿಸುವುದು ಬೇಡ ಎಂದು ಜಮಾಅತರಿಗೆ ತಿಳಿಸಿದ್ದರಿಂದ ಅವರನ್ನು ಬಿಟ್ಟು ಬಿಡಲಾಗಿತ್ತು.
ಆದರೆ ಕೆಲವೇ ಹೊತ್ತಿನಲ್ಲಿ 12ರಷ್ಟು ಯುವಕರು ಕಾರು ಮತ್ತು ಅಟೋದಲ್ಲಿ ತಲವಾರು ಹಾಗೂ ಚೈನ್ಗಳೊಂದಿಗೆ ಆಗಮಿಸಿ ಸ್ಥಳೀಯರೊಂದಿಗೆ ಹೊಡೆದಾಟ ನಡೆಸಿದ್ದಾರೆ. ಈ ಸಂದರ್ಭ ಅಬೂಬಕ್ಕರ್ ಎಂಬವರಿಗೆ ಗಾಯವಾಗಿದ್ದು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳಲ್ಲಿ ಇಬ್ಬರು ರೌಡಿಗಳು!
ಬಂಧಿತ ಆರೋಪಿಗಳ ಪೈಕಿ ಇಬ್ಬರು ರೌಡಿಗಳಿದ್ದು ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಸಮೀರ್ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯಾಗಿದ್ದರೆ, ಇನ್ನೂರ್ವ ಸಲ್ಮಾನ್ ಮೊಹಮ್ಮದ್ ಕೆಲವು ತಿಂಗಳ ಹಿಂದೆ ಮುಕಚ್ಚೇರಿಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿ ಕದಡುವ ಷಡ್ಯಂತ್ರ
ಅಡ್ಕರೆಪಡ್ಪು ಪ್ರದೇಶ ಶಾಂತಿ, ಸೌಹಾರ್ದತೆಗೆ ಹೆಸರಾಗಿದ್ದು, ಇಲ್ಲಿ ಗಾಂಜಾ ವ್ಯಸನಿಗಳ ಗಂಧ ಗಾಳಿಯೂ ಇಲ್ಲ. ಸರ್ವ ಧರ್ಮೀಯರೂ ಸಹೋದರತೆಯಿಂದ ಜೀವನ ಸಾಗಿಗುತ್ತಿದ್ದಾರೆ. ಆದರೆ ಇದನ್ನು ಸಹಿಸದ ಕಿಡಿಗೇಡಿಗಳು ಪ್ರದೇಶದಲ್ಲಿ ಶಾಂತಿ ಕದಡುವ ಉದ್ದೇಶದಿಂದಲೇ ಮಸೀದಿಯ ಕಾರ್ಯಕ್ರಮಕ್ಕೆ ಅಳವಡಿಸಲಾಗಿದ್ದ ಟ್ಯೂಬ್ಲೈಟ್ ಒಡೆದು ಅನ್ಯ ಸಮುದಾಯದ ವಿರುದ್ಧ ಗೂಬೆ ಕೂರಿಸಿ ಪರಿಸರದಲ್ಲಿ ಅಶಾಂತಿಯ ವಾತವಾರಣ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸ್ಥಳೀಯರು ತಾಳ್ಮೆಯಿಂದ ವರ್ತಿಸಿದ್ದರಿಂದ ಅನಾಹುತ ತಪ್ಪಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.