ಬೆಂಗಳೂರು ಜ 15: ಆತ ಬಾನಂಗಳದಲ್ಲಿ ಮೂಡುವ ಪಟಾಕಿಯ ಚಿತ್ತಾರವನ್ನು ಸವಿಯಲೆಂದು ಅಲ್ಲಿಗೆ ಹೋಗಿದ್ದ ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಅದೇ ಪಟಾಕಿಗೆ ಆತ ಬಲಿಯಾಗಿಬಿಟ್ಟ. ಇಂತಹ ದಾರುಣ ಘಟನೆ ಜ 14 ರ ಭಾನುವಾರ ರಾತ್ರಿ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ನಲ್ಲಿ ನಡೆದಿದೆ. ಆಕಸ್ಮಿಕವಾಗಿ ತಲೆಯ ಮೇಲೆ ಬಿದ್ದ ಪಟಾಕಿ ಸ್ಪೋಟಗೊಂಡು ಪುಟ್ಟ ಬಾಲಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮೃತ ಬಾಲಕನನ್ನು ಧನುಷ್ (12) ಎಂದು ಗುರುತಿಸಲಾಗಿದೆ.
ಪ್ರತಿ ವರ್ಷವೂ ಹೊಸ ವರ್ಷದ ಎರಡನೇ ಭಾನುವಾರ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಲೂರ್ದ್ ಚರ್ಚ್ ನಲ್ಲಿ ಪಟಾಕಿ, ಸಿಡಿಮದ್ದು ಪ್ರದರ್ಶನ ಇರುತ್ತದೆ. ಅದೇ ಪ್ರಕಾರವಾಗಿ ನಿನ್ನೆಯೂ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಾರು ಜನ ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಧನುಷ್ ಸಹ ಬಾಗವಹಿಸಿದ್ದ. ಕಾರ್ಯಕ್ರಮ ನಡೆಯುತ್ತಿರುವ ವೇಳೆ ಬಾಲಕನ ತಲೆ ಮೇಲೆ ಪಟಾಕಿ ಬಿದ್ದು ಅಲ್ಲೇ ಸ್ಪೋಟಗೊಂಡಿದೆ. ಸ್ಫೋಟದ ರಭಸಕ್ಕೆ ತಲೆ ಬುರುಡೆ ಎರಡು ಹೋಳಾಗಿ ಮೆದುಳು ಹೊರಬಂದಿದೆ. ಬಾಲಕ ತ್ಯಾಗರಾಜನಗರ ನಿವಾಸಿಯಾಗಿದ್ದು ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೃಹತ್ ಪಟಾಕಿ ಪ್ರದರ್ಶನ ಏರ್ಪಡಿಸಿದ್ದರೂ ಯಾವುದೇ ಸುರಕ್ಷತಾ ಕ್ರಮವನ್ನು ಪಾಲಿಸಿಲ್ಲ , ಸ್ಥಳದಲ್ಲಿ ಆಂಬುಲೆನ್ಸ್ ಆಗಲಿ ಅಥವಾ ಅಗ್ನಿ ಅವಘಡ ಸಂಭವಿಸಿದರೆ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಯಾವುದು ಇರಲಿಲ್ಲ ಅನ್ನುವ ಆರೋಪ ಇದೀಗ ಕಾರ್ಯಕ್ರಮ ಆಯೋಜಕರ ವಿರುದ್ದ ಕೇಳಿಬಂದಿದೆ.