ಮಂಗಳೂರು/ಉಡುಪಿ, ನ 29 (Daijiworld News/MSP): ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ 2007 ರಲ್ಲಿ ಸ್ಥಾಪನೆಯಾದಾಗ ಮೊದಲ ನಿರ್ದೇಶಕರಲ್ಲಿ ಒಬ್ಬರಾಗಿದ್ದ ವಿಕ್ಟರ್ ಡಿಸೋಜಾ (55) ಅವರು ಹೃದಯಾಘಾತದಿಂದ ನ.29 ರ ಶುಕ್ರವಾರ ವಿಧಿವಶರಾಗಿದ್ದಾರೆ.
90 ರ ದಶಕದ ಆರಂಭದಲ್ಲಿ ಮುಂಬೈನಲ್ಲಿ 'ಪಲಿಮಾರ್ ಎಲೆಕ್ಟ್ರಿಕಲ್ಸ್' ಹೆಸರಿನಲ್ಲಿ ತಮ್ಮ ವಿದ್ಯುತ್ ಗುತ್ತಿಗೆ ಮತ್ತು ಇಂಟಿರಿಯರ್ ಡೆಕೊರೇಟರ್ ಉದ್ಯಮವನ್ನು ಸ್ಥಾಪಿಸಿದ್ದ ವಿಕ್ಟರ್ ಡಿಸೋಜಾ, ಕೆಲವು ವರ್ಷಗಳ ಹಿಂದೆಯಷ್ಟೇ ವಾಸ್ತವ್ಯವನ್ನು ಪಲಿಮಾರಿಗೆ ಸ್ಥಳಾಂತರಿಸಿದ್ದರು. ಇವರು 'ವಿಲ್ಸನ್ ಹೊಲೊ ಬ್ಲಾಕ್ಸ್' ಜೊತೆಗೆ ಉಡುಪಿ ಮತ್ತು ಮಂಗಳೂರಿನಲ್ಲಿ ಇಂಟಿರಿಯರ್ ಡೆಕೊರೇಟರ್ ಉದ್ಯಮವನ್ನು ನಡೆಸುತ್ತಿದ್ದರು.
ತಮ್ಮ ಊರಾದ ಪಲಿಮಾರು ಮತ್ತು ಮಂಗಳೂರಿನಲ್ಲಿ ಉತ್ತಮ ವ್ಯವಹಾರ ಸಂಬಂಧ ಹೊಂದಿದ್ದ ಅವರದ್ದು ಪ್ರಾಮಾಣಿಕತೆ ಮತ್ತು ಸ್ನೇಹಜೀವಿ ವ್ಯಕ್ತಿತ್ವವಾಗಿತ್ತು.
ಪತ್ನಿ ಲೀನಾ ಡಿಸೋಜಾ ಮತ್ತು ಪುತ್ರ ವಿಲ್ಸನ್ ಡಿಸೋಜಾ ಅವರನ್ನು ವಿಕ್ಟರ್ ಅಗಲಿದ್ದಾರೆ. ಪುತ್ರ ವಿಲ್ಸನ್ ಡಿಸೋಜಾ ಅಮೇರಿಕಾದಲ್ಲಿ ಓದುತ್ತಿದ್ದು, ರಜೆಯ ನಿಮಿತ್ತ ಅವರು ಪಲಿಮಾರಿಗೆ ಬಂದಿದ್ದರು.
ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ವಿಕ್ಟರ್ ಕೊನೆಯ ಕ್ಷಣದವರೆಗೂ ಖುಷಿಯಾಗಿದ್ದರು. ಗುರುವಾರ ರಾತ್ರಿ ದಮಾಸ್ಕಟ್ಟೆಯ ಕಿರೆಂ ಎಂಬಲ್ಲಿ ನಡೆದ ವಿವಾಹ ಸಮಾರಂಭದಲ್ಲಿಯೂ ಭಾಗಿಯಾಗಿದ್ದರು.
ದಾಯ್ಜಿವರ್ಲ್ಡ್ ಮಾಧ್ಯಮ ಸಮೂಹದ ಯಶಸ್ಸಿಗೆ ಅವರು ನೀಡಿದ ಕೊಡುಗೆಗಳಿಗಾಗಿ ಅಪಾರ ಕೃತಜ್ಞತೆಯನ್ನು ಸಲ್ಲಿಸುತ್ತಾ, ದಾಯ್ಜಿವರ್ಲ್ಡ್ ಮೀಡಿಯಾ ಗ್ರೂಪ್ನ ನಿರ್ದೇಶಕರು, ಸಿಬ್ಬಂದಿ ಸದಸ್ಯರು ಮತ್ತು ಹಿತೈಷಿಗಳು ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಇವರ ಅಂತ್ಯಕ್ರಿಯೆ ನ.೩೦ ರ ಶನಿವಾರ ಸಂಜೆ ಪಲಿಮಾರ್ ಚರ್ಚ್ ನಲ್ಲಿ ನಡೆಯಲಿದೆ.