ಮಂಗಳೂರು, ಸೆ15: ಅಲ್ ಝಮೀರ್ ಎಂಬ ಮರೆವು ರೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 24ರಂದು ಮಂಗಳೂರಿನಲ್ಲಿ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫಾರಂ ಫಿಝಾ ಮಾಲ್ ನ ಅಸಿಸ್ಟೆಂಟ್ ಸೆಂಟರ್ ಮ್ಯಾನೇಜರ್ ಫಯಾಜ್ ಎಮ್ ಎಚ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಾರತ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ಅಲ್ ಝಮೀರ್ ರೋಗಿಗಳಿದ್ದು, ಇದು ಜೀವವನ್ನೇ ಬಲಿ ತೆಗೆದುಕೊಳ್ಳುವ ದೊಡ್ಡ ರೋಗವಾಗಿದೆ. ಈ ರೋಗದ ಬಗ್ಗೆ ಜಾಗೃತಿ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಫೋರಂ ಮಾಲ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ೧೦೦೦ ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ಸಾಮಾಜಿಕ ಕಳಕಳಿಯ ಓಟದಲ್ಲಿ ಮಂಗಳೂರಿನ ಜನತೆ ಸೇರಿಕೊಳ್ಳಬೇಕು ಎಂದು ವಿನಂತಿಸಿದರು.
ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ವೈದ್ಯ ಡಾ. ಪ್ರೊ. ಎ ತ್ರಿಮೂರ್ತಿ ಇದೇ ಸಂದರ್ಭದಲ್ಲಿ ಮಾತನಾಡಿ, ಅಲ್ ಝಮೀರ್ ಕಾಯಿಲೆಗೆ ಔಷಧಿ ಹುಡುಕುವ ಕಾರ್ಯ ಆರಂಭವಾಗಿದೆ. ಇದಕ್ಕೆ ಫೋರಂನಂತಹ ಕಾರ್ಪೋರೇಟರ್ ಕಂಪೆನಿಗಳ ಸಹಾಯದ ಅವಶ್ಯಕತೆ ಇದೆ ಎಂದು ಹೇಳಿದರು.