ಉಳ್ಳಾಲ ಜ 15 : ಇಬ್ಬರನ್ನು ವಿವಾಹವಾಗಿ ಅವರಿಗೆ ಮೂವರು ಮಕ್ಕಳನ್ನು ಕರುಣಿಸಿದ ಭೂಪನೋರ್ವ ಇದೀಗ ಹುಬ್ಬಳ್ಳಿ ಮೂಲದ ಹಿಂದೂ ಯುವತಿಯನ್ನು ಮೂರನೇ ವಿವಾಹವಾಗಿದ್ದು, ಈ ಬಗ್ಗೆ ಇಬ್ಬರು ಮಕ್ಕಳನ್ನು ಸಲಹಲು ಕಷ್ಟಪಡುತ್ತಿರುವ ಬಾಯಿ ಬಾರದ ಮುಸ್ಲಿಂ ಪತ್ನಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೆ, ಮತಾಂತರ ನಡೆಸಿ ಹಿಂದೂ ಯುವತಿಯನ್ನು ವಿವಾಹವಾಗಿರುವುದಾಗಿ ಆರೋಪಿಸಿದ್ದಾರೆ.
ಮೂಲತ: ಬೋಳಿಯಾರ್ ರಂತಡ್ಕ ನಿವಾಸಿ ಆಸೀಫ್ (35) ಆರೋಪಿತನಾಗಿದ್ದಾನೆ. 18 ವರ್ಷಗಳ ಹಿಂದೆ ಲಾರಿ ಚಾಲಕನಾಗಿದ್ದ ಆಸೀಫ್, ಇನೋಳಿ ಬಿಸೈಟಿನ ಅಫ್ಸಾ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದನು. ಆದರೆ ವಿವಾಹ ನಂತರ ಆಸೀಫ್ ಅಸಲಿಯತ್ತು ಬೆಳಕಿಗೆ ಬಂದಿದ್ದು, ಆತನಿಗೆ ಅದಾಗಲೇ ವಿವಾಹವಾಗಿ ಒಂದು ಮಗುವಿತ್ತು. ಪಂಡಿತ್ ಹೌಸ್ ಮೂಲದ ಯುವತಿಯನ್ನು ವಿವಾಹವಾಗಿದ್ದು, ಒಬ್ಬ ಪುತ್ರನಿದ್ದನು. ಆದರೆ ಆರ್ಥಿಕವಾಗಿ ಕಂಗೆಟ್ಟ ಮೊದಲ ಪತ್ನಿ ಕಾನೂನಾತ್ಮಕ ಹೋರಾಟಕ್ಕೆ ಇಳಿಯದೆ, ತನ್ನ ಪಾಡಿಗೆ ಬೀಡಿ ಕಟ್ಟಿ ಮಗನನ್ನು ಸಲಹುತ್ತಿದ್ದಾರೆ. ಆದರೆ ಅಫ್ಸಾ ಜತೆಗೆ ಮದುವೆಯಾಗಿದ್ದ ಆಸೀಫ್ ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಸೇರಿದಂತೆ ಇಬ್ಬರು ಮಕ್ಕಳು ಜನಿಸಿದ್ದಾರೆ. ಮಕ್ಕಳು ಬೆಳೆದುನಿಲ್ಲುತ್ತಿದ್ದಂತೆ ಕಳೆದ ಮೂರು ವರ್ಷದಿಂದ ಎರಡನೇ ಪತ್ನಿ ಅಫ್ಸಾಳನ್ನು ತೊರೆದ ಆಸೀಫ್ ಕೆಲಸಕ್ಕೆಂದು ಹುಬ್ಬಳ್ಳಿಗೆ ತೆರಳಿದ್ದನು. ಆಸೀಫ್ ಮನೆಗೆ ಬಾರದೇ ಮಕ್ಕಳನ್ನು ಸಲಹಲು ಅಸಾಧ್ಯವಾದ ಪತ್ನಿ ಅಫ್ಸಾ ಪತಿಯನ್ನು ಹುಡುಕುವ ಪ್ರಯತ್ನ ಮಾಡಿದಾಗ, ಆತ ಹುಬ್ಬಳ್ಳಿಯಲ್ಲಿ ಇರುವುದಾಗಿ ತಿಳಿದುಬಂದಿತ್ತು. ಆದರೆ ಸಂಪರ್ಕಿಸಿದಾಗಲೂ ಯಾವುದೇ ಸ್ಪಂದನೆ ಸಿಗದೇ ಇದ್ದಾಗ, ಕೊಣಾಜೆ ಪೊಲೀಸ್ ಠಾಣೆಯ ಮೊರೆ ಹೋಗಿದ್ದರು. ಈ ವೇಳೆ ಪೊಲೀಸರು ಆಸೀಫ್ ನನ್ನು ಸಂಪರ್ಕಿಸಿದಾಗ ತಿಂಗಳಿಗೆ ರೂ. 2,000 ಖರ್ಚಿಗೆ ನೀಡುವ ಭರವಸೆ ನೀಡಿದ್ದನು. ಆದರೆ ಮೂರು ವರ್ಷವಾದರೂ ಈವರೆಗೂ ಖರ್ಚಿಗಾಗಿ ಯಾವುದೇ ಹಣವನ್ನು ನೀಡಿಲ್ಲ. ಆತನ ಸಂಪರ್ಕವೂ ಸಿಗುತ್ತಿರಲಿಲ್ಲ. ಬೀಡಿ ಕಟ್ಟಿ ಜೀವನ ನಿರ್ವಹಿಸುತ್ತಿರುವ ಅಫ್ಸಾರ ಹೆಸರಿನಲ್ಲಿರುವ ಪಾಸ್ ಬುಕ್ ಮತ್ತು ಮಕ್ಕಳ ಸ್ಕಾಲರ್ಶಿಪ್ ಕೂಡಾ ಆಸೀಫ್ ಹೆಸರಿನಲ್ಲಿದ್ದು, ಜೀವನ ನಿರ್ವಹಣೆಯೇ ಕಷ್ಟಕರವಾಗಿತ್ತು.
ಸ್ತ್ರೀ ಸಂಘಗಳ ಮೊರೆ :
ಇನೋಳಿ ನವೋದಯ ಸ್ತ್ರೀ ಶಕ್ತಿ ಸಂಘ ಮತ್ತು ದೀಪ ಸ್ತ್ರೀ ಶಕ್ತಿ ಸಂಘಗಳ ಮೊರೆ ಹೋದ ಅಫ್ಸಾ ಅವರ ವೃದ್ಧ ತಾಯಿಯ ಮನವಿಗೆ ಸ್ಪಂದಿಸಿದ ಸ್ತ್ರೀ ಶಕ್ತಿ ಸಂಘದ ಕಾರ್ಯಕರ್ತೆಯರು ಆಸೀಫ್ ಇರುವಿಕೆ ಕುರಿತು ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಹುಬ್ಬಳ್ಳಿಯಲ್ಲಿ ಹಿಂದೂ ಯುವತಿಯನ್ನು ವಿವಾಹವಾಗಿರುವ ಈತ ದೇರಳಕಟ್ಟೆ ಸಮೀಪ ಬಾಡಿಗೆ ಮನೆಯಲ್ಲಿದ್ದಾನೆಂಬ ಮಾಹಿತಿ ತಿಳಿದುಬಂದಿತ್ತು. ಅದರಂತೆ ಎರಡು ಸ್ತ್ರೀಶಕ್ತಿ ಸಂಘಗಳ ಸದಸ್ಯರು ಇಂದು ಕೊಣಾಜೆ ಪೊಲೀಸ್ ಠಾಣೆಗೆ ಅಫ್ಸಾ ಸಹಿತ ದೂರು ನೀಡಿದ್ದಾರೆ. ಆದರೆ ಕೌಟುಂಬಿಕ ಪ್ರಕರಣವಾಗಿರುವುದರಿಂದ ನ್ಯಾಯಾಲಯದಲ್ಲೇ ದೂರು ದಾಖಲಿಸುವಂತೆ ಪೊಲೀಸರು ನಿರ್ದೇಶಿಸಿದ್ದಾರೆ. ಆಸೀಫ್ ಹಿಂದೂ ಯುವತಿಯನ್ನು ವಿವಾಹವಾಗಿರುವುದರಿಂದ ಪ್ರಕರಣ ಗಂಭೀರತೆಯನ್ನು ಪಡೆದುಕೊಂಡಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ.