ಬಂಟ್ವಾಳ, ನ 29 (DaijiworldNews/SM): ಕಾಂಗ್ರೇಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ನೇತ್ರತ್ವದ ಎಸ್.ಐ.ಪ್ರಸನ್ನ ಅವರ ತಂಡ ಘಟನೆ ನಡೆದ ಕೆಲವೇ ಗಂಟೆ ಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದೆ.
ಆರೋಪಿಗಳಾದ ಪ್ರಸಾದ್ ಬೆಳ್ಚಾಡ, ಶ್ರೀಪತಿ ಆಚಾರ್ಯ ಹಾಗೂ ಕಾರ್ತಿಕ್ ಆಚಾರ್ಯ ಅವರನ್ನು ಕಟೀಲು ಸಮೀಪ ಬಂಧಿಸಿದ್ದಾರೆ.
ಘಟನೆಯ ವಿವರ:
ಪತಿ ಪತ್ನಿ ಇಬ್ಬರಿಗೆ ತಂಡವೊಂದು ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮೇರೆಮಜಲು ಎಂಬಲ್ಲಿ ಇಂದು ಮುಂಜಾನೆ ವೇಳೆ ನಡೆದಿತ್ತು.
ಘಟನೆಯಲ್ಲಿ ಮೇರೆಮಜಲು ನಿವಾಸಿ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಮತ್ತು ಆತನ ಪತ್ನಿ ಶೋಭಾ ಅವರು ಗಾಯಗೊಂಡಿದ್ದರು. ಮುಂಜಾನೆ ಸುಮಾರು 4 ಗಂಟೆಯ ವೇಳೆ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೇರೆಮಜಲು ನಿವಾಸಿ ರೌಡಿಶೀಟರ್ ಪ್ರಸಾದ್ ಬೆಳ್ಚಾಡ ಮತ್ತು ಆತನ ಜೊತೆ ಇಬ್ಬರು ಸ್ನೇಹಿತರು ಸೇರಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಯೋಗೀಶ್ ಪ್ರಭು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೈಯಕ್ತಿಕ ಹಳೆಯ ದ್ವೇಷ ಕಾರಣ?
ಈ ಹಲ್ಲೆಗೆ ಹಳೆಯ ವೈಯಕ್ತಿಕ ದ್ವೇಷವೇ ಕಾರಣವಾಗಿರಬಹುದು ಎಂಬುದನ್ನು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪ್ರಸಾದ್ ಬೆಳ್ಚಾಡ ಅವರ ಹೆಸರನ್ನು ಯೋಗೀಶ್ ಪ್ರಭು ಅವರು ದುರ್ಬಳಕೆ ಮಾಡಿ ಠಾಣೆಗೆ ದೂರು ನೀಡಿದ್ದಾರೆ ಎಂದು ಕೆಲ ವರ್ಷಗಳ ಹಿಂದೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಯೂ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅ ಬಳಿಕವೂ ಇವರ ಮಧ್ಯೆ ದ್ವೇಷದ ಕಿಡಿ ಹಾರಿರಲಿಲ್ಲ. ಮತ್ತೆ ಅದೇ ವೈಯಕ್ತಿಕ ಹಳೆಯ ದ್ವೇಷ ವೇ ಈ ಹಲ್ಲೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.