ಮಂಗಳೂರು, ಜ 15 : ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಜ 15 ರ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಆಂದೋಲನದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ದ.ಕ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ, ಅನಿಯಂತ್ರಿತ ಜನಸಂಖ್ಯೆಯಿಂದಾಗಿ ದೇಶದಲ್ಲಿ ಲಭ್ಯವಿರುವ ಸಕಲ ಸೌಲಭ್ಯ ಅಭಿವೃದ್ಧಿ ಮೌಲ್ಯ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಮುಂಬರುವ ಕಾಲದಲ್ಲಿ ಈ ಹೆಚ್ಚುತ್ತಿರುವ ಜನಸಂಖ್ಯೆಯನ್ನು ತಡೆಗಟ್ಟದೇ ಇದ್ದಲ್ಲಿ ಭವಿಷ್ಯದಲ್ಲಿ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗಬಹುದು ಹಾಗೂ ಭಾರತದ ಸಮಗ್ರತೆ ಹಾಗೂ ಐಕ್ಯತೆಗೆ ಧಕ್ಕೆಯುಂಟಾಗಬಹುದು. ಇದನ್ನು ತಪ್ಪಿಸಲು ಎಲ್ಲಾ ನಾಗರಿಕರಿಗೆ ಜನಸಂಖ್ಯೆ ನಿಯಂತ್ರಣ ಹಾಗೂ ಸಮತೋಲನೆಗಾಗಿ ಅತೀ ಶೀಘ್ರವಾಗಿ ಕಾನೂನನ್ನು ಜಾರಿಗೆ ತರಬೇಕು ಎಂದರು. ಅದರೊಂದಿಗೆ, ಉತ್ತರಕಾಶಿ, ಹರಿದ್ವಾರ, ಇತ್ಯಾದಿ ವಿವಿಧ ಪವಿತ್ರ ಕ್ಷೇತ್ರದಲ್ಲಿ "ಮಾಘ ಮೇಳಾ" ಧಾರ್ಮಿಕ ಉತ್ಸವ ನಡೆಯುತ್ತದೆ. ಈ ನಿಮಿತ್ತವಾಗಿಯೇ ಲಕ್ಷಗಟ್ಟಲೆ ಭಕ್ತಾದಿಗಳು ಪವಿತ್ರ ಸ್ನಾನವನ್ನು ಮಾಡಲು ಯಾತ್ರೆಯನ್ನು ಮಾಡುತ್ತಾರೆ. ಈ ಸಮಯದಲ್ಲಿ ರೈಲು ಹಾಗೂ ಸಾರಿಗೆ ಸಂಪರ್ಕ ಮಂಡಳಿಯ ಬಾಡಿಗೆಯನ್ನು ಹೆಚ್ಚಿಸಲಾಗುತ್ತದೆ. ಇದನ್ನು ಕಡಿತಗೊಳಿಸಬೇಕು ಎಂದರು. ಆಂದೋಲನದಲ್ಲಿ ತುಳುನಾಡ ರಕ್ಷಣಾ ಸಮಿತಿಯ ಜ್ಯೋತಿ ಜೈನ್, ಧರ್ಮಪ್ರೇಮಿಗಳಾದ ಶ್ರೀ ಉದಯಶಂಕರ್, ಲೋಕೇಶ್ ಕುತ್ತಾರ್, ಸತೀಶ್, ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.