ಬಂಟ್ವಾಳ, ನ 30 (Daijiworld News/MB): ಸಿದ್ದಕಟ್ಟೆ ಸಮೀಪದ ಕರ್ಪೆ ಮುಗೇರು ಎಂಬಲ್ಲಿ ನವೆಂಬರ್ 28ರ ಗುರುವಾರ ಬೆಳಿಗ್ಗೆ ವಿವಾಹಿತ ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಈ ಆತ್ಮಹತ್ಯೆಗೆ ಮಾವನ ಕಿರುಕುಳ ಕಾರಣ ಎಂದು ನೀಡಿದ್ದ ದೂರಿನ ಅನ್ವಯ ಮಾವ ಭುಜಬಲಿ ಕಂಬಳಿ (66) ಅವರನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ನವೆಂಬರ್ 28ರ ಗುರುವಾರ ಬೆಳಿಗ್ಗೆ ಅಭಯ್ ಕುಮಾರ್ ಅವರ ಪತ್ನಿ ಪ್ರತಿಭಾ ಜೈನ್ (35) ಪತಿ ಹಾಸನದಲ್ಲಿ ನಡೆಯುವ ಸಂಬಂಧಿಕರ ಮದುವೆಗೆ ಮುಂಜಾನೆ 5 ಗಂಟೆಯ ವೇಳೆ ತೆರಳಿದ ಬಳಿಕ ಸುಮಾರು 6 ಗಂಟೆಯ ವೇಳೆ ಪ್ರತಿಭಾ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಕುರಿತು ಪ್ರತಿಭಾ ಅವರ ತಂದೆ ಚಿಕ್ಕಮಗಳೂರು ಸಂಶೆ ನಿವಾಸಿ ಜಿನರಾಜಯ್ಯ , ತನ್ನ ಮಗಳ ಆತ್ಮಹತ್ಯೆಗೆ ಮಾವ ಭುಜಬಲಿ ಅವರೇ ಕಾರಣ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿ ಸಮಗ್ರವಾದ ತನಿಖೆಗೆ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಮಾವ ಭುಜಬಲಿಯವರನ್ನು ಬಂಧಿಸಲಾಗಿತ್ತು.
2 ತಿಂಗಳ ಹಿಂದೆ ಭುಜಬಲಿಯವರ ಪತ್ನಿ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದು ಈ ಬಳಿಕ ಭುಜಬಲಿಯವರು ಮರುಮದುವೆಯಾಗುವ ತಯಾರಿಯಲ್ಲಿದ್ದರು. ಈ ವಿಷಯ ಮತ್ತು ಕೆಲವು ಸಣ್ಣ ಪುಟ್ಟ ವಿಷಯದಲ್ಲಿ ಮನೆಯಲ್ಲಿ ವೈಮನಸ್ಸು ಬೆಳೆದಿದ್ದು ಮಾವನ ಮಾನಸಿಕ ಕಿರುಕುಳದಿಂದಾಗಿ ಪ್ರತಿಭಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.