ಕುಂದಾಪುರ, ನ 30 (Daijiworld News/MB) : ಬೈಂದೂರಿನ ಯಡ್ತರೆಯಲ್ಲಿ ನವೆಂಬರ್ 29ರ ಶುಕ್ರವಾರ ನಿಗದಿಯಾಗಿದ್ದ ವಿವಾಹವು ವರ ನಾಪತ್ತೆಯಾದ ಕಾರಣ ರದ್ದಾಗಿದೆ.
ನಾಪತ್ತೆಯಾದ ವರ ಬಳ್ಕೂರಿನ ರಾಮಚಂದ್ರ ಶೇರೆಗಾವ್ ಅವರ ಪುತ್ರ ಪ್ರವೀಣ್ ಕುಮಾರ್ ಬೆಂಗಳೂರಿನ ಖಾಸಗೀ ಕಂಪೆನಿಯೊಂದರಲ್ಲಿ ೧೦ ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದ.
ಬೈಂದೂರು ಸಮೀಪದ ಯುವತಿಯೊಂದಿಗೆ ಯಡ್ತರೆಯ ನಡುಮನೆ ನಿವಾಸಿ ಪ್ರವೀಣ್ ಕುಮಾರ್ ಅವರ ನಿಶ್ಚಿತಾರ್ಥವು 3 ತಿಂಗಳ ಹಿಂದೆಯೇ ನಡೆದಿದ್ದು ವಿವಾಹ ನಡೆಸಲೆಂದು ದಿನ ನಿಗದಿ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಪ್ರವೀಣ್ ನವೆಂಬರ್ 26ರಂದು ಊರಿಗೆ ಬಂದಿದ್ದು ಕೆಲಸದ ನಿಮಿತ ಹಿಂದಕ್ಕೆ ಹೋಗಿದ್ದು ಆ ನಂತರ ಊರಿಗೆ ಬಾರದೆ ಮೊಬೈಲ್ ಫೋನ್ ಸ್ವಿಚ್ಆಫ್ ಮಾಡಿಕೊಂಡಿದ್ದ. ಈ ಹಿನ್ನಲೆಯಲ್ಲಿ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈಗಾಗಲೇ ಪೊಲೀಸರು ಹುಡುಗಾಟ ಆರಂಭ ಮಾಡಿದ್ದು ಪ್ರವೀಣ್ ಬೆಂಗಳೂರಿನಲ್ಲಿಯೇ ಇರುವುದಾಗಿ ಮಾಹಿತಿ ಲಭಿಸಿದೆ. ಆತ ಈ ಮೊದಲೇ ವಿವಾಹವಾಗಿದ್ದಾನೆ ಎಂಬ ಮಾತುಗಳು ಕೇಳಿ ಬಂದಿದ್ದು ಪೊಲೀಸರು ಈ ಕುರಿತು ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ವರ ನಾಪತ್ತೆಯಾದ ಹಿನ್ನಲೆಯಲ್ಲಿ ವಧುವಿನ ಮನೆಯವರು, ನಮಗೆ ವಂಚನೆ ನಡೆಸಿದಂತಾಗಿದೆ. ವಿವಾಹಕ್ಕೆಂದು ಸಭಾಭವನ, ಅಡುಗೆಯವರನ್ನೆಲ್ಲಾ ನಿಗದಿ ಮಾಡಿದ್ದು ಇದರ ಖರ್ಚನ್ನು ವರನ ಕಡೆಯವರೇ ಭರಿಸಬೇಕು. ಇಲ್ಲದಿದ್ದಲ್ಲಿ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.