ಕುಂದಾಪುರ, ನ 30(Daijiworld News/MSP): ಐದು ನೂರು ವರ್ಷಗಳಷ್ಟು ಹಿಂದಿನ ಚಾರಿತ್ರಿಕ ವೀರರಾದ ಕೋಟಿಚೆನ್ನಯ್ಯರು ಇಂದಿಗೂ ಪ್ರಸ್ತುತವಾಗಿ ಉಳಿಯುತ್ತಾರೆ. ಕರಾವಳಿಯಲ್ಲಿ ಕಾಣಸಿಗುವ ಕೋಟಿ ಚೆನ್ನಯ್ಯ ಗರಡಿಗಳು ಕಾರಣಿಕ ಪ್ರಸಿದ್ಧ ಸ್ಥಳಗಳಾಗಿ ಗುರುತಿಸಿಕೊಂಡಿವೆ. ತುಳುನಾಡಿನಿಂದ ಆರಂಭವಾಗಿ ಕರಾವಳಿ ಉದ್ದಕ್ಕೂ ಕಂಡು ಬರುವ ಕೋಟಿಚೆನ್ನಯ್ಯ ಗರಡಿಗಳಲ್ಲಿ ಈ ಭಾಗದ ಕೊನೆಯ ಗರಡಿ ಬೈಂದೂರಿನ ಯಡ್ತರೆಯಲ್ಲಿರುವ ನಾಕಟ್ಟೆಯ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ.
ಯಡ್ತರೆಯ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಈಗ ಕಾಯಕಲ್ಪದ ಶುಭಪರ್ವ. ಈ ಗರಡಿ ಶಿಲಾಮಯ ಹಾಗೂ ಕಾಷ್ಠ ವೈಭವದಿಂದ ಅವಿರ್ಭವಿಸುತ್ತಿದೆ. ಸುಮಾರು ಎರಡು ಕೋಟಿ ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಗರೋಡಿ ಜೀರ್ಣೋದ್ದಾರಗೊಳ್ಳುತ್ತಿದೆ.
ರಾಷ್ಟ್ರೀಯ ಹೆದ್ದಾರಿಗೆ ಸನೀಹದಲ್ಲೇ ಇರುವ ಈ ಗರಡಿಯ ಎದುರಿಗೆ ನದಿ ಮಂದಗಮನೆಯಾಗಿ ಹರಿಯುತ್ತಿದೆ. ಹಿಂಭಾಗದ ತೆಂಗು-ಕಂಗಿನ ವೈಭವವಾದ ಅಕ್ಕಪಕ್ಕ ಭತ್ತದ ಗದ್ದೆಗಳು. ಕೋಟಿ ಚೆನ್ನಯ್ಯರ ನಿಜ ಜೀವನದಲ್ಲಿ ಬಯಸುತ್ತಿದ್ದುದು ಕೂಡಾ ಇಂಥಹದ್ದೇ ವಾತಾವರಣ. ಅಂಥಹ ಸಮೃದ್ದ ಭೂಸಿರಿಯ ನಡುವೆ ಈ ಗರಡಿ ಇದೆ. ಇಲ್ಲಿ ಪ್ರಧಾನ ಶಕ್ತಿಗಳಾಗಿ ಶ್ರೀ ಬ್ರಹ್ಮ, ಶ್ರೀ ಯಕ್ಷೆ, ಕೋಟಿ ಚೆನ್ನಯ್ಯ, ದೇಯಿಬೈದೆದಿ, ಮಾಯಿಂದಾಲೆ, ಹಾಗುಳಿ ಸಹಿತ ಹಲವು ಶಕ್ತಿಗಳ ಸಾನಿಧ್ಯವಿದೆ. ಗರ್ಭಗೃಹ ಜೀರ್ಣಗೊಂಡಿದ್ದು ಸರ್ವ ಭಕ್ತರ ಅಭಿಪ್ರಾಯದಂತೆ ಜೀರ್ಣೋದ್ದಾರ ಮಾಡಲು ಸಂಕಲ್ಪಿಸಿ ದೈವಜ್ಞರ ಮೂಲಕ ಅಷ್ಟಮಂಗಲ ಪ್ರಶ್ನೆ ಇಟ್ಟು, ಅದರಲ್ಲಿ ಕಂಡು ಬಂದಂತೆ ತಂತ್ರಿವರೇಣ್ಯರ ಮೂಲಕ ಪ್ರಾಯಶ್ಚಿತ್ತಾದಿಗಳನ್ನು ನೆರವೇರಿಸಿ, ಜೀರ್ಣೋದ್ದಾರದ ಪ್ರಯುಕ್ತ ಶಕ್ತಿಗಳನ್ನು ಸಂಕೋಚಿಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ಕಾಮಗಾರಿ ಆರಂಭಿಸಲಾಯಿತು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ದಾರ ಸಮಿತಿ ರಚನೆಗೊಂಡಿದ್ದು, ಆ ಸಮಿತಿಯ ನೇತೃತ್ವದಲ್ಲಿ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ.
ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರು, ಆಗಮ ಪಂಡಿತರು ಆದ ಕೇಂಜ ಶ್ರೀಧರ ತಂತ್ರಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಮಾಧವನ್ ಪೊದುವಾಳ್ ಅವರು ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಧಾರ್ಮಿಕ ವಿಧಿಗಳನ್ನು ಮುಗಿಸಿಕೊಂಡು, ಧಾರ್ಮಿಕ ಚೌಕಟ್ಟಿನಲ್ಲಿ ಗರಡಿಯ ಪುನರ್ ನಿರ್ಮಾಣ ಕಾರ್ಯ ಆರಂಭಿಸಲಾಯಿತು.
ಈಗಾಗಲೇ ಗರಡಿಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶಿಲಾ ಕೆತ್ತನೆಗಳು ಮುಗಿದಿದೆ. ಮೇಲ್ಛಾವಣಿಗೆ ತಾಮ್ರದ ಹೊದಿಕೆ ಕಾರ್ಯ ಪ್ರಗತಿಯಲ್ಲಿದೆ. ಗರಡಿಯ ವಿನ್ಯಾಸವೇ ವಿಶಿಷ್ಠವಾದುದು. ಇಲ್ಲಿಯೂ ಕೂಡಾ ಗರೋಡಿಗಳ ಸಾಂಪ್ರಾದಾಯಿಕತೆಯನ್ನು ಎತ್ತಿ ಹಿಡಿಯಲಾಗಿದೆ. ಗರ್ಭಗೃಹ ಎಂದು ಕರೆಯಲ್ಪಡುವ ಒಳಾಂಗಣದ ಗೋಡೆಗಳು ಸಂಪೂರ್ಣ ಶಿಲೆಯಿಂದಲೇ ರಚಿತವಾಗಿದೆ. ಅತ್ಯಂತ ಕರಾರುವಕ್ಕಾದ ಕೆಲಸ ಇಲ್ಲಿ ಎದ್ದು ಕಾಣುತ್ತಿದೆ. ಶಿಲೆಗಳಲ್ಲಿ ಅರಳಿರುವ ಕಲೆಯ ಸೊಬಗು ಅನನ್ಯ. ಒಳಾಂಗಣದ ಮೇಲ್ಛಾವಣಿಯ ದಾರು ಕೆತ್ತನೆ ಮತ್ತು ದಾರು ವಿನ್ಯಾಸ ಅತ್ಯಂತ ಅದ್ಬುತ. ಮತ್ತೆ ಮತ್ತೆ ನೋಡಬೇಕು ಎನಿಸುವ ಕಲೆಯ ವೈಶಿಷ್ಟ್ಯತೆ ಇಲ್ಲಿದೆ. ಬೃಹತ್ ಮರದ ಪಕಾಸುಗಳು, ಅದರಲ್ಲಿ ಅರಳಿರುವ ಕಲೆಯ ವಿನ್ಯಾಸ, ಕರಕುಶಲತೆಯ ಜೋಡಣೆ, ಆಕರ್ಷಕ ಜಾಲಂಧ್ರಗಳು, ಕಾಷ್ಠದ ಮಣಿಗಳು ಅದ್ಬುತ ಎನಿಸುತ್ತದೆ.
ಶಿಲೆ ಕೆತ್ತನೆ ಕಾರ್ಯವನ್ನು ಕೃಷ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದ್ದರೆ, ಮರದ ಕೆತ್ತನೆ ಕಾರ್ಯವನ್ನು ದಾರು ಶಿಲ್ಪಿ ಶ್ರೀಪತಿ ಆಚಾರ್ಯ ಹೇರಾಡಿ ಬಾರ್ಕೂರು ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಪ್ರತಿಯೊಂದು ಕೆಲಸಗಳು ಕೂಡಾ ಶಿಸ್ತುಬದ್ಧವಾಗಿ ನಡೆಯುತ್ತಿವೆ.
ಗರಡಿಯ ಪುರುತ್ಥಾನದಲ್ಲಿ ಭಕ್ತಾದಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಕಾಮಗಾರಿಯೂ ವೇಗವಾಗಿ, ಶಿಸ್ತುಕಟ್ಟಾಗಿ ನೆಡೆಯುತ್ತಿದೆ. ಸುಮಾರು ೨.೫ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ ನಡೆಯುತ್ತಿದೆ. ಬೈಂದೂರು ನಗರಕ್ಕೆ ಶೋಭೆಯಂತೆ ಗರಡಿಯ ನಿರ್ಮಾಣವಾಗುತ್ತಿದೆ.