ಮೂಡಬಿದಿರೆ, ಡಿ 1 (Daijiworld News/MB) : ತಮ್ಮ ಖಾಸಗಿ ಕಾರ್ಯದ ಕಾರಣದಿಂದಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ತಮ್ಮ ಹುಟ್ಟೂರಾದ ಮೂಡಬಿದಿರೆ ಸಮೀಪದ ಬೆಳುವಾಯಿಯ ಕಾನದಲ್ಲಿರುವ ತಮ್ಮ ಮನೆಗೆ ಆಗಮಿಸಿದ್ದು ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ.
ಶನಿವಾರ ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ತನ್ನ ವೃತ್ತಿಗುರು, ಕಾರ್ಕಳದ ನ್ಯಾಯಾವಾದಿ ಎಂಕೆ ವಿಜಯಕುಮಾರ್ ಅವರ ಪುತ್ರ ವಿಪುಲ್ ಅವರ ಪುತ್ರನ ಆರತಕ್ಷತೆ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದಾರೆ.
ಅವರು ಅಯೋಧ್ಯೆ ಹಾಗೂ ತ್ರಿವಳಿ ತಲಾಖ್ ತೀರ್ಪಿನ ನ್ಯಾಯಾಧೀಶರ ತಂಡದಲ್ಲಿದ್ದ ಏಕೈಕ ಮುಸ್ಲಿಂ ನ್ಯಾಯಾಮೂರ್ತಿಯಾಗಿದ್ದು, ಅಯೋಧ್ಯೆ ತೀರ್ಪಿನ ಬಳಿಕ ಕೆಲವು ಮತಾಂಧ ಸಂಘಟನೆಗಳು ಬೆದರಿಕೆಯನ್ನು ಒಡ್ಡಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಿದೆ.
ಅಯೋಧ್ಯೆ ತೀರ್ಪಿನಲ್ಲಿ ಬೆದರಿಕೆ ಇರುವ ಅವರಿಗೆ ವಿಶೇಷ ಭದ್ರತೆ ಒದಗಿಸಿದ್ದ ಹಿನ್ನಲೆಯಲ್ಲಿ ಮನೆಯವರನ್ನು ಹೊರತುಪಡಿಸಿ ಬೇರೆ ಯಾರಿಗೂ ಅವರೊಂದಿಗೆ ಮಾತಾನಾಡುವ ಅವಕಾಶ ಕಲ್ಪಿಸಿಲ್ಲ.
ಪೊಲೀಸ್ ಇಲಾಖೆಯು ಬಿಗಿ ಭದ್ರತೆ ಒದಗಿಸಿದ್ದು, ಕೆಎಸ್ಆರ್ಪಿ, ಸಿಆರ್ಪಿಎಫ್, ಶ್ವಾನದಳ, ಬಾಂಬ್ ನಿಷ್ಕ್ರೀಯ ದಳ, ಗನ್ಮ್ಯಾನ್ಗಳನ್ನೊಳಗೊಂಡ ಸಿಎಆರ್ ವ್ಯಾನ್, ತುರ್ತು ಸೇವೆಗೆ ಆಂಬ್ಯುಲೆನ್ಸ್ಗಳ ಭದ್ರತೆ ಒದಗಿಸಲಾಗಿದೆ. ಅವರು ಇಂದು ನವದೆಹಲಿಗೆ ಹಿಂದಿರುಗಲಿದ್ದಾರೆ.