ನೆಲ್ಯಾಡಿ ಜ 16: ಪುತ್ತೂರು ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆಯ ಅರಣ್ಯದಂಚಿನಲ್ಲಿರುವ ಮಿತ್ತಮಜಲಿನ ಲೀಲಾ ಎಂಬವರ ಮೂರು ಮನೆಗಳಿಗೆ ಜ 15 ಭಾನುವಾರ ಸಂಜೆ 6.30ರ ಸುಮಾರಿಗೆ ನಾಲ್ವರು ಇದ್ದ ಶಂಕಿತ ನಕ್ಸಲರ ತಂಡ ವೊಂದು ಭೇಟಿ ನೀಡಿದ ಘಟನೆ ನಡೆದಿದೆ. ಭಾನುವಾರ ಸಂಜೆ ಮನೆಗೆ ಬಂದವರು, ತಾವು ನಕ್ಸಲರು, ನಮ್ಮ ಮೊಬೈಲ್ ಲ್ಯಾಪ್ ಟಾಪ್ ಚಾರ್ಜ್ ಮಾಡಬೇಕಾಗಿದೆ. ತಮಗೆ ಏನು ಮಾಡುವುದಿಲ್ಲ ಎಂದಿದ್ದಾರೆ. ತಂಡದಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರಿದ್ದರು. ಅವರು ಕೋವಿ, ಗನ್ಗಳನ್ನು ಹೊಂದಿದ್ದರು ಎನ್ನಲಾಗಿದೆ.ಮಿತ್ತಮಜಲಿನ ಮೋಹನ್, ಅವರ ತಂಗಿ ಲೀಲಾ ಹಾಗೂ ತಮ್ಮ ಸುರೇಶ್ ಅವರ ಮನೆಗಳು ಮಾತ್ರ ಪರಿಸರದಲ್ಲಿದ್ದು, ಮೂರೂ ಮನೆಗಳಿಗೆ ಅಪರಿಚಿತರ ತಂಡ ಭೇಟಿ ನೀಡಿ ದಿನಸಿ ಸಾಮಗ್ರಿಗಳನ್ನು ಕೇಳಿ ಪಡೆದುಕೊಂಡಿದ್ದಾರೆ.
ದೋಸೆ ಮಾಡಿಸಿ ತಿಂದರು..!
ಲೀಲಾ ಅವರ ಮನೆಯ ಹತ್ತಿರ ಬಂದು 'ನಾವು ಕಾಡಿನಲ್ಲಿರುವ ನಕ್ಸಲರು, ನಮ್ಮ ಮೊಬೈಲ್ ಮತ್ತು ಲ್ಯಾಪ್ಟಾಪ್ ಗಳನ್ನು ಚಾರ್ಜ್ ಮಾಡಿಕೊಡಿ' ಎಂದು ಮನೆಯವರಲ್ಲಿ ಕೇಳಿಕೊಂಡಿದ್ದಾರೆ. ನಮಗೆ ಹಸಿವಾಗುತ್ತಿದ್ದು ಮನೆಯಲ್ಲಿ ತಿನ್ನುವುದಕ್ಕೆ ಏನಿದೆ ಎಂದೂ ಕೇಳಿದ್ದಾರೆ. ಅಕ್ಕಿ ಕಡೆದಿಟ್ಟಿರುವುದು ಇದೆ ಎಂದು ತಿಳಿದಾಗ ದೋಸೆ ಮಾಡಿಕೊಡಿ ಎಂದು ಹೇಳಿ ಮಾಡಿಸಿ ತಿಂದಿದ್ದಾರೆ.
ಸಾಂಧರ್ಬಿಕ ಚಿತ್ರ
ತಂಡದಲ್ಲಿ ನಮ್ಮವರು ಇನ್ನಷ್ಟು ಮಂದಿ ಇದ್ದು ಅವರು ಇಲ್ಲೇ ಸಮೀಪದ ಗುಡ್ಡೆಯಲ್ಲಿದ್ದಾರೆ ಎಂದು ತಿಳಿಸಿದ್ದು , ಬಂದವರೆಲ್ಲಾ ತುಳು, ತಮಿಳು, ಮಲೆಯಾಳಿ ಭಾಷೆಯಲ್ಲಿ ಮಾತಾಡುತ್ತಿದ್ದರು. ಭಾನುವಾರ ಸಂಜೆ ಈ ಘಟನೆ ನಡೆದರೂ, ಸೋಮವಾರ ಮದ್ಯಾಹ್ನದವರೆಗೆ ಈ ಸುದ್ದಿ ಪೊಲೀಸರಿಗೆ ಹಾಗೂ ಊರವರಿಗೆ ತಿಳಿದಿರಲಿಲ್ಲ. ಸಂಜೆ ವೇಳೆಗೆ ಸುದ್ದಿ ತಿಳಿದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಹೆಚ್ಚಿನ ಮಾಹಿತಿ ಪಡೆದು ತನಿಖೆ ಮುಂದುವರಿಸಿದ್ದಾರೆ. ಇನ್ನೊಂದೆಡೆ ಕಾಡಿಗೆ ಬೇಟೆಗೆಂದು ತೆರಳಿದ ಬೇಟೆಗಾರರ ತಂಡವು ಇದಾಗಿರಬಹುದೆಂದು ಶಂಕೆ ವ್ಯಕ್ತವಾಗಿದ್ದು ಆ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ. ಇನ್ನೊಂದೆಡೆ ಮಂಗಳವಾರ ಬೆಳಗ್ಗಿನಿಂದಲೇ ನಕ್ಸಲರಿಗೆ ಶೋಧ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.