ಉಳ್ಳಾಲ ಜ 16: ಬಿಳಿ ತಲೆ ಹುಳ ಬಾಧೆಯಿಂದ ಉಳ್ಳಾಲ ಭಾಗದಲ್ಲಿ ಸತ್ತು ಹೋಗಿರುವ ತೆಂಗಿನಮರ ಹೊಂದಿದ ರೈತರಿಗೆ ಸಚಿವರಾಗಲಿ, ಸಂಸದರಾಗಲಿ ಪರಿಹಾರವಾಗಿ ವಿಶೇಷ ಪ್ಯಾಕೇಜನ್ನು ನೀಡಲು ವಿಫಲರಾಗಿದ್ದು, ತುರ್ತಾಗಿ ಪರಿಹಾರ ಕ್ರಮಕೈಗೊಳ್ಳದೇ ಇದ್ದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡ ಮನೋಹರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ವರ್ಷದಿಂದ ಕಲ್ಲಾಪು, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕುತ್ತಾರುಪದವು, ಹರೇಕಳ ಗಡಿ ಪ್ರದೇಶಗಳಲ್ಲಿ ಬಿಳಿ ತಲೆ ಹುಳದ ಬಾಧೆಗೆ ತುತ್ತಾದ ತೆಂಗಿನಮರಗಳು ಸತ್ತುಹೋಗಿವೆ. ಈ ಬಗ್ಗೆ ಸರಕಾರ ಮಧ್ಯಪ್ರವೇಶಿಸಿ ತೆಂಗು ಬೆಳೆಗಾರರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದರೂ, ಒತ್ತಾಯ ಒತ್ತಾಯವಾಗಿಯೇ ಉಳಿದಿದೆ. ಈವರೆಗೂ ಯಾರ ಸ್ಪಂದನೆಯೇ ದೊರೆತಿಲ್ಲ.ಆಹಾರ ಸಚಿವರ ವೈಯಕ್ತಿಕವಾಗಿ ಭೇಟಿ ನೀಡಿ ಸರಕಾರದಿಂದ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಲಾಗಿತ್ತು. ರಾ.ಹೆ.೬೬ರಲ್ಲಿ ಸಂಸದರು ಹಲವು ಬಾರಿ ತೆರಳುತ್ತಿದ್ದರೂ ತೆಂಗು ಕುರಿತ ವಿಚಾರವನ್ನು ಗಮನಿಸಿಯೇ ಇಲ್ಲದಂತೆ ಕಾಣುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ತೆಂಗು ಅಭಿವೃದ್ಧಿ ಮಂಡಳಿ ಪರಿಹಾರ ಕುರಿತು ವರದಿಯನ್ನೇ ರಚಿಸಿಲ್ಲ. ರೈತ ಸಂಪರ್ಕ ಸಭೆಯನ್ನು ನಡೆಸುವ ಪುರುಸೊತ್ತಿಲ್ಲದ ಸಂಸದರು, ಸಚಿವರು ಈವರೆಗೂ ರಾಜ್ಯ ಆಗಲಿ ಕೇಂದ್ರ ಸರಕಾರದ ಗಮನಕ್ಕೆ ತಾರದಿರುವುದು ಹಲವು ಅನುಮಾನಗಳಿಗೂ ಕಾರಣವಾಗುತ್ತದೆ. ಕೆಲ ತಿಂಗಳುಗಳ ಹಿಂದೆ ಕೃಷಿ ಅಧಿಕಾರಿ ಸೀಮಾ ಅವರ ನೇತೃತ್ವದಲ್ಲಿ ಮಾಹಿತಿ ಕಾರ್ಯಗಾರ ನಡೆದಿತ್ತು.
ಕಲ್ಲಾಪು ಸಭೆಯಲ್ಲಿಯೂ ಸತ್ತ ಗಿಡಗಳನ್ನು ಕಡಿದು, ಅದೇ ಸ್ಥಳದಲ್ಲಿ ಬೇರೆ ಗಿಡಗಳನ್ನು ನೆಡಲು ಇಲಾಖೆ ವತಿಯಿಂದ ಸೂಚಿಸಲಾಗಿತ್ತು. ಆದರೆ ಇತರೆ ಕಾರ್ಯಗಳಿಗೆ ಕೋಟ್ಯಂತರ ರೂ ವ್ಯಯಿಸುತ್ತಿರುವ ಸರಕಾರ ಕನಿಷ್ಟ ಬೆಳೆ ನಷ್ಟ ಪರಿಹಾರ, ಕಡಿದ ಮರಗಳ ಸ್ಥಳದಲ್ಲಿ ನೂತನವಾಗಿ ಸಂಶೋಧಿಸಲಾದ ಡಾರ್ಫ್ ( ಕುಬ್ಜ) ಬಹುಬೇಗ ಬೆಳೆಯುವ ಗಿಡಗಳನ್ನು ಉಚಿತವಾಗಿ ನೀಡುವ ಮೂಲಕ ಅಮೂಲ್ಯ ತೆಂಗಿನ ಮರಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಶ್ರಮಿಸಬೇಕಿದೆ. ತುರ್ತಾಗಿ ಕ್ರಮಕೈಗೊಳ್ಳದೇ ಇದ್ದಲ್ಲಿ ಸರ್ವೋಚ್ಛ ನ್ಯಾಯಾಲಯದ ಮೂಲಕ ದಾವೆ ಹೂಡಿ ರೈತರಿಗೆ ನ್ಯಾಯ ಒದಗಿಸಲು ರೈತ ಸಂಘ ಹಸಿರು ಸೇನೆ ಸಿದ್ಧ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.