ಮಂಗಳೂರು, ಡಿ 2 (Daijiworld News/MB) : ಅರಬ್ ದೇಶದಲ್ಲಿ ಅತ್ಯಾಚಾರ ನಡೆದ ಕೆಲವೇ ದಿನಗಳಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಠಿಣ ಶಿಕ್ಷೆ ನೀಡಲಾಗುತ್ತದೆ, ಅಂತಹ ಕಾನೂನು ನಮ್ಮ ದೇಶದಲ್ಲೂ ಜಾರಿಗೆ ಬರಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಆಗ್ರಹಿಸಿದರು.
ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಕೃತ್ಯವನ್ನು ಖಂಡಿಸಿ ನಿನ್ನೆ ರಾತ್ರಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮನುಕುಲಕ್ಕೆ ಆಗಿರುವ ಅವಮಾನಮಾನವಾಗಿದೆ. ಇದೊಂದು ಹೀನಕೃತ್ಯವೂ ಅಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು 'ಬೇಟಿ ಪಡಾವೋ, ಬೇಟಿ ಬಚಾವೋ' ಎಂದು ಹೇಳುತ್ತಾರೆ, ಆದರೆ ಇದು ಕೇವಲ ಸ್ಲೋಗನ್ ಆಗಿ ಉಳಿಯಬಾರದು. ದೇಶದ ಹೆಣ್ಮಕ್ಕಳನ್ನು ರಕ್ಷಿಸಲು ಕಠಿಣ ಕಾನೂನು ಜಾರಿಗೆ ತರಬೇಕಾಗಿದೆ. ಅರಬ್ ದೇಶದಲ್ಲಿರುವಂತೆ ಸಾರ್ವಜನಿಕ ಗಲ್ಲಿಗೇರಿಸುವ ಕಾನೂನು ನಮ್ಮ ದೇಶದಲ್ಲೂ ಜಾರಿಗೆ ಬಂದಾಗ ಹೆಣ್ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬಹುದು. ಇಂತಹ ಪ್ರಕರಣಸ ವಿರುದ್ಧ ದೇಶದ ಜನರು ಒಂದಾಗಬೇಕಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಕಳೆದ ವರ್ಷ27 ಸಾವಿರ ಅತ್ಯಾಚಾರ ಪ್ರಕರಣ ನಡೆದಿದೆ, ಆದರೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಯಾಕೆ ಸಾಧ್ಯವಾಗಿಲ್ಲ. ದೇಶ, ವಿದೇಶ ತಿರುಗಾಡುವ ಪ್ರಧಾನಿಯವರು ನಮ್ಮ ದೇಶದ ಹೆಣ್ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಕಾನೂನು ಜಾರಿಗೆ ತರಲಿ. ಬಿಜೆಪಿಯವರೇ ನೀವು ಎಷ್ಟು ಬೇಕಾದರೂ ಯಾವ ವಿಷಯದಲ್ಲಿ ಬೇಕಾದರೂ ರಾಜಕೀಯ ಮಾಡಿ, ಆದರೆ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವ ಕಾನೂನು ಜಾರಿಗೆ ತನ್ನಿ ಎಂದು ಉಳ್ಳಾಲ ನಗರಸಭೆಯ ಮಾಜಿ ಸದಸ್ಯ ದಿನೇಶ್ ರೈ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುರೇಶ್ ಭಟ್ನಗರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿಗಳಾದ ಇಕ್ಬಾಲ್ ಸಾಮಾನಿಗೆ, ಸಲೀಂ ಮೇಗ, ಉಳ್ಳಾಲ ಮಹಿಳಾ ಘಟಕದ ಅಧ್ಯಕ್ಷೆ ದೇವಕಿ ಉಳ್ಳಾಲ್, ಮುಖಂಡರಾರ ಸುಧಾಕರ್ ಬಿ. ಅಸೈಗೋಳಿ, ಪದ್ಮನಾಭ ಗಟ್ಟಿ, ನಗರಸಭೆಯ ಸದಸ್ಯರಾದ ಭಾರತಿ, ಮಹಮ್ಮದ್ ಮುಕಚ್ಚೇರಿ, ಮಾಜಿ ಅಧ್ಯಕ್ಷ ಹುಸೈನ್ ಕುಂಞಮೋನು, ಮಾಜಿ ಸದಸ್ಯರಾದ ದಿನೇಶ್ ರೈ, ಬಾಝಿಲ್ ಡಿಸೋಜ ಇನ್ನಿತರರು ಉಪಸ್ಥಿತರಿದ್ದರು.