ಉಡುಪಿ, ಡಿ 2 (Daijiworld News/MB) : ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಶಿಕ್ಷಣ ಇಲಾಖೆಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೂಡ ರಾಜ್ಯದಲ್ಲಿ 56,739 ಹಾಗೂ ಅವಿಭಜಿತ ದ.ಕ. ಜಿಲ್ಲೆಯಲ್ಲಿ 3,128 ಉಡುಪಿಯಲ್ಲಿ 112 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದು 2018-19ನೇ ಸಾಲಿನಲ್ಲಿ ಸರ್ವಶಿಕ್ಷಣ ಇಲಾಖೆ ಕಲಿಕೆಯಿಂದ ಹಿಂದೆ ಸರಿದಿರುವ ಮಕ್ಕಳ ಬಗ್ಗೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಸಮೀಕ್ಷೆ ಅನ್ವಯ ರಾಜ್ಯಮಟ್ಟದಲ್ಲಿ ಅತೀ ಕಡಿಮೆ ಮಕ್ಕಳು ಶಾಲೆಯಿಂದ ಹೊರಗುಳಿದ ಒಟ್ಟು 34 ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು (ಉತ್ತರ) ಪ್ರಥಮ ಸ್ಥಾನ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
ಉಡುಪಿಗೆ 8ನೇ ಸ್ಥಾನ
ಶಿಕ್ಷಣದ ಗುಣಮಟ್ಟ ಮತ್ತು ಸಾಕ್ಷರತೆಗೆ ಹೆಚ್ಚು ಒತ್ತುಕೊಟ್ಟಿರುವ ಉಡುಪಿ, ದ.ಕ ಜಿಲ್ಲೆ ಇದೀಗ ರಾಜ್ಯಮಟ್ಟದಲ್ಲಿ ಅತೀ ಕಡಿಮೆ ಮಕ್ಕಳು ಶಾಲೆಯಿಂದ ಹೊರಗುಳಿದ ಪಟ್ಟಿಯಲ್ಲಿ ಉಡುಪಿ 8ನೇ ಸ್ಥಾನ ಪಡೆದುಕೊಂಡಿದೆ. ಸಮೀಕ್ಷೆ ವರದಿ ಅನ್ವಯ ಉಡುಪಿ ಜಿಲ್ಲೆಯಲ್ಲಿ 681 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಕಡ್ಡಾಯ ಶಿಕ್ಷಣ ವ್ಯಾಪ್ತಿಗೆ ಒಳಪಡುವ (6ರಿಂದ 13ವರ್ಷ) 112 ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದರೆ, 14-15ರ ವಯೋಮಿತಿಯಲ್ಲಿ 435 ಹಾಗೂ 16-17ರ ವಯೋಮಿತಿಯಲ್ಲಿ 134 ಶಿಕ್ಷಣ ತೊರೆದಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಶಾಲೆಯಿಂದ ಹೊರಗುಳಿದ 681 ಮಕ್ಕಳಲ್ಲಿ 142 ಮಕ್ಕಳನ್ನು ಶಾಲೆಗೆ ಮತ್ತೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದ.ಕ.ಗೆ 27ನೇ ಸ್ಥಾನ
ದ.ಕ. ಜಿಲ್ಲೆಯಲ್ಲಿ 2,448 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ರಾಜ್ಯವಾರು ಅತೀ ಕಡಿಮೆ ವಿದ್ಯಾರ್ಥಿಗಳ ಶಿಕ್ಷಣದಿಂದ ವಂಚಿತ ಪಟ್ಟಿಯಲ್ಲಿ ದ.ಕ. 27ನೇ ಸ್ಥಾನ ಪಡೆದುಕೊಂಡಿದೆ.
ಹೊರಗುಳಿಯುವುದು (out of school children) OOSC ಎಂದರೆ?
ಶಾಲೆಗೆ ದಾಖಲಾದ 1ರಿಂದ 10ನೇ ತರಗತಿಯ ಯಾವುದೇ ವಿದ್ಯಾರ್ಥಿ 7 ದಿನ ತರಗತಿಗೆ ಗೈರು ಹಾಜರಾದರೆ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಯನ್ನು ತಗರತಿಗೆ ಕರೆತರುವ ಪ್ರಯತ್ನ ಮಾಡಬೇಕು. ಇಲ್ಲದಿದ್ದಲ್ಲಿ ಮಕ್ಕಳ ಕಲ್ಯಾಣ ಇಲಾಖೆಗೆ ದೂರು, ಪೋಷಕರಿಗೆ ನೋಟಿಸ್ ಕಳುಹಿಸಲಾಗುತ್ತದೆ. ಇಷ್ಟಾದರೂ ವಿದ್ಯಾರ್ಥಿ ಬಾರದೆ ಹೋದರೆ ಅಂತಹ ಮಗವನ್ನು 'ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿ' ಎಂದು ಪರಿಗಣಿಸಲಾಗುತ್ತದೆ. (ಕೆಲವೊಮ್ಮೆ ಬೇರೆ ಕಡೆ ದಾಖಲಾತಿ ಆಗಿ, ವಿವರ ಕೊಡದೆ ಇದ್ದರೂ ಒಒಎಸ್ಸಿ ಪಟ್ಟಿಯಲ್ಲಿ ತೋರಿಸುತ್ತದೆ) ಇತ್ತೀಚೆಗೆ 9 ಅಥವಾ 10ನೇ ತರಗತಿಯಲ್ಲಿ ಅನುತ್ತೀರ್ಣರಾದರೆ ಮತ್ತೆ ಶಾಲೆಗೆ ಹಾಜರಾಗುವ ಪ್ರಮಾಣ ಕಡಿಮೆ. ಹಾಗಾಗಿ ಶಾಲೆ ಬಿಟ್ಟವರ ಸಂಖ್ಯೆಗೆ ಬಂದಾಗ 9- 10 ತರಗತಿಯ ಮಕ್ಕಳೇ ಹೆಚ್ಚು.
ಶಾಲೆ ಬಿಡಲು ಕಾರಣ
ಉಡುಪಿಯಲ್ಲಿ ವಲಸೆ ಕಾರಣಕ್ಕೆ ಹೆಚ್ಚಿನ ಮಕ್ಕಳು ಶಾಲೆಯನ್ನು ಬಿಟ್ಟಿದ್ದಾರೆ. ಶಿಕ್ಷಣದಲ್ಲಿ ನಿರಾಸಕ್ತಿ, ಅನಾರೋಗ್ಯವೂ ಶಾಲೆ ಬಿಡಲು ಇನ್ನೊಂದು ಮುಖ್ಯ ಕಾರಣವಾಗಿದೆ. ಋತುಮತಿಯಾಗಿರುವ ಕಾರಣಕ್ಕಾಗಿ ಬಾಲಕಿಯರನ್ನು ಶಾಲೆ ಕಳುಹಿಸಲು ಪೋಷಕರು ಹಿಂದೇಟು ಹಾಕುವ ಪ್ರಕರಣವೂ ದಾಖಲಾಗಿದೆ.
ಯಾವುದೇ ಅಲೆಮಾರಿ ಸಮುದಾಯ ಅಥವಾ ಕಾರ್ಮಿಕರ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂಬ ಉದ್ದೇಶದಿಂದ 2002 ರಿಂದ 2006 ರವರೆಗೆ ಟೆಂಟ್ ಶಾಲೆ ವ್ಯವಸ್ಥೆ ಬಂದಿತ್ತು. ಆದರೆ ಶಿಕ್ಷಕರ ಕೊರತೆಯಿಂದ ಮತ್ತು ಪೋಷಕರ ನಿರಾಸಕ್ತಿಯಿಂದ ಅದು ನಿಂತು ಹೋಯಿತು. ಸರಕಾರಿ ಅನುದಾನಿತ ಶಾಲೆಗಳಲ್ಲಿ ಅನುದಾನದ ಕೊರತೆಯಿಲ್ಲದಿದ್ದರೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದೇ ಖೇದಕರ.
ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಬಿಟ್ಟ 112 ವಿದ್ಯಾರ್ಥಿಗಳಲ್ಲಿ 56 ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ. ವಲಸೆ ಹೋಗುವ ಕುಟುಂಬದ ಮಕ್ಕಳು ಯಾವುದೇ ಮಾಹಿತಿ ನೀಡದೆ ಶಾಲೆಗಳನ್ನು ಬಿಡುತ್ತಾರೆ. ಶಾಲೆಯಿಂದ ಹೊರಗುಳಿದ್ದ ಮಕ್ಕಳನ್ನು ಶಾಲೆಗೆ ಕರೆತರಲು ಅಗತ್ಯವಿರುವ ಕಾರ್ಯಕ್ರಮ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶಾಲೆಯಿಂದ ಹೊರಗುಳಿದ್ದ ಮಕ್ಕಳ ಸಂಖ್ಯೆ ಕಡಿಮೆ ಇದೆ, ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಉಪನಿರ್ದೇಶಕ ಶೇಷಶಯನ ಕಾರಿಂಜೆಯವರು ದಾಯ್ಜಿವರ್ಲ್ಡ್ ಗೆ ತಿಳಿಸಿದ್ದಾರೆ.