ನವದೆಹಲಿ ಜ 16: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾದಿಯಲ್ಲಿ ಇರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ತುಟ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಹಿನ್ನೆಲೆಯಲ್ಲಿ ಡೀಸೆಲ್ ಸಾರ್ವಕಾಲಿಕ ಗರಿಷ್ಟ ದರ ತಲುಪಿದರೆ, ಪೆಟ್ರೋಲ್ ಮೂರುವರೆ ವರ್ಷಗಳ ಗರಿಷ್ಟ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ 61.74ರೂ.ಗೆ ಮತ್ತು ಪೆಟ್ರೋಲ್ ಬೆಲೆ 71ರೂ. ಏರಿಕೆಯಾಗಿದೆ.

ಇಂಡಿಯನ್ ಆಯಿಲ್ ಕಾರ್ಪೋ ರೇಶನ್ ವೆಬ್ ಸೈಟ್ ಪ್ರಕಾರ, ದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ ಪ್ರತೀ ಲೀಟರ್ ಗೆ 71.18 ರೂ., ಕೋಲ್ಕತ್ತಾದಲ್ಲಿ 73.91ರೂ., ಮುಂಬೈನಲ್ಲಿ 79.06 ರೂ., ಹಾಗೂ ಚೆನ್ನೈನಲ್ಲಿ 73.80 ರೂ.ಆಗಿದೆ.ದೆಹಲಿಯಲ್ಲಿ ಡೀಸೆಲ್ ಬೆಲೆ 61.74ರೂ., ಕೋಲ್ಕತ್ತಾದಲ್ಲಿ 64.40 ರೂ., ಮುಂಬೈನಲ್ಲಿ 65.74 ರೂ. ಹಾಗೂ ಚೆನ್ನೈ ನಲ್ಲಿ 65.08 ರೂ. ಆಗಿದೆ.
2017ರ ಡಿಸೆಂಬರ್ 12 ರಿಂದ ಇಂಧನ ಬೆಲೆಗಳು ಏರುಗತಿಯಲ್ಲಿ ಇವೆ. ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ಎಕ್ಸೈಸ್ ಡ್ಯೂಟಿ ತಗ್ಗಿಸಬೇಕು ಎನ್ನುವ ಬೇಡಿಕೆ ಕೇಳಿ ಬರುತ್ತಿದೆ. ಬಿಜೆಪಿ ನೇತೃತ್ವದಲ್ಲಿನ ಎನ್ಡಿಎ ಸರ್ಕಾರ 2017ರ ಅಕ್ಟೋಬರ್ 4ರಂದು ಮಾತ್ರ ಒಮ್ಮೆ ಪ್ರತಿ ಲೀಟರ್ಗೆ 2 ರಂತೆ ಎಕ್ಸೈಸ್ ಡ್ಯೂಟಿ ತಗ್ಗಿಸಿತ್ತು. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬೆಂಗಳೂರಿನಲ್ಲಿ ಕ್ರಮವಾಗಿ 69.50 ಮತ್ತು 57ಕ್ಕೆ ಇಳಿಕೆ ಕಂಡಿದ್ದವು. ಆದರೆ, ನಂತರದ ದಿನಗಳಲ್ಲಿ ಬೆಲೆ ಮತ್ತೆ ಏರುಗತಿಯಲ್ಲಿ ಸಾಗಿದ್ದರಿಂದ ಈ ಎರಡೂ ಇಂಧನಗಳು ದುಬಾರಿಯಾಗಿ ಪರಿಣಮಿಸಿವೆ.